ನ್ಯೂಸ್ ನಾಟೌಟ್ : ಮೌಢ್ಯ ಮತ್ತು ಕಂದಾಚಾರ ಮನುಷ್ಯನ ವಿವೇಚನೆಯನ್ನು ಎಷ್ಟರಮಟ್ಟಿಗೆ ನಾಶಮಾಡಬಲ್ಲದು ಎಂಬುದಕ್ಕೆ ಕಲ್ಪತರು ನಾಡಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆನ್ಲೈನ್ ಜ್ಯೋತಿಷಿಯೊಬ್ಬನ ಮಾತು ನಂಬಿ, ಹೆತ್ತ ತಾಯಿಯನ್ನೇ ಮಗಳು ತೆಗೆದಿರುವ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.
ಪುಷ್ಪಾವತಿ (55) ಮೃತ ದುರ್ದೈವಿ ತಾಯಿ. ಇವರ ಸ್ವಂತ ಮಗಳು ಸುಚಿತ್ರಾ (33) ಈ ಘೋರ ಕೃತ್ಯ ಎಸಗಿದ ಆರೋಪಿ.
ತಂದೆಯ ನಿಧನಕ್ಕೆ ತಾಯಿ ಕಾರಣ
ಆರೋಪಿ ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ಪತಿಯೊಂದಿಗೆ ವಾಸವಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಸುಚಿತ್ರಾಳ ತಂದೆ ಮೃತಪಟ್ಟಿದ್ದರು. ತಂದೆಯ ಅಗಲಿಕೆಗೆ ಕಾರಣ ಹುಡುಕಲು ಸುಚಿತ್ರಾ ಆನ್ಲೈನ್ ಮೂಲಕ ಜ್ಯೋತಿಷಿಯೊಬ್ಬರ ಸಂಪರ್ಕಿಸಿದ್ದಳು. ಈ ವೇಳೆ ಜ್ಯೋತಿಷಿ, “ನಿನ್ನ ತಂದೆಯ ನಿಧನಕ್ಕೆ ನಿನ್ನ ತಾಯಿಯೇ ಕಾರಣ. ಆಕೆ ಮಾಟ-ಮಂತ್ರ ಮಾಡಿಸಿ ತಂದೆಯನ್ನ ಬಲಿಪಡೆದಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿದ್ದಳು ಎನ್ನಲಾಗಿದೆ.
ಜ್ಯೋತಿಷಿಯ ಮಾತನ್ನೇ ವೇದವಾಕ್ಯ ಎಂದು ನಂಬಿದ ಸುಚಿತ್ರಾ, ತಾಯಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಇದೇ ದ್ವೇಷದ ಹಿನ್ನೆಲೆಯಲ್ಲಿ ತಾಯಿ ಪುಷ್ಪವತಿ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ, ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಮುಗಿಸಿ
ನಾಟಕವಾಡಿ ಮಗಳು ಸಿಕ್ಕಿ ಬಿದ್ದಳು.
ಬಳಿಕ ಯಾರಿಗೂ ಅನುಮಾನ ಬಾರದಂತೆ ಇದನ್ನು ‘ಸಹಜ ಸಾವು’ ಎಂದು ಬಿಂಬಿಸಲು ಸುಚಿತ್ರಾ ಪ್ರಯತ್ನಿಸಿದ್ದಳು. ತಾಯಿ ಸಹಜವಾಗಿ ಮೃತಪಟ್ಟಿದ್ದಾಳೆ ಎಂದು ಸುಳ್ಳು ಹೇಳಿ, ಶೀಘ್ರವಾಗಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಿದ್ದಳು. ಆದರೆ, ಮೃತದೇಹದ ಸ್ಥಿತಿ ಮತ್ತು ಆ ಸಂದರ್ಭದಲ್ಲಿ ಸುಚಿತ್ರಾಳ ವರ್ತನೆಯನ್ನು ಕಂಡು ಗ್ರಾಮಸ್ಥರಿಗೆ ಬಲವಾದ ಅನುಮಾನ ಬಂದಿದೆ. ಕೂಡಲೇ ಗ್ರಾಮಸ್ಥರು ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಸದ್ಯ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ













