ನ್ಯೂಸ್ ನಾಟೌಟ್: ಸುಳ್ಯದ ಮುದ್ದು ಮಕ್ಕಳ ದಿ ಬೆಸ್ಟ್ ಸ್ಕೂಲ್ ಎಂದು ಖ್ಯಾತಿ ಪಡೆದಿರುವ ಅಂಜಲಿ ಮೊಂಟೆಸ್ಸೂರಿ ಶಾಲೆಯ ವಾರ್ಷಿಕೋತ್ಸವ ಅದ್ದೂರಿ ಕಾರ್ಯಕ್ರಮದೊಂದಿಗೆ ಫೆ.10ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

“ಉತ್ಕರ್ಷ” (ಏಳಿಗೆ, ಅಭಿವೃದ್ದಿ, ಪ್ರಗತಿ) ಎಂಬ ಧ್ಯೇಯದೊಂದಿಗೆ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ್ ಅವರು, ‘ತಾಯಿ ಹಕ್ಕಿ ಹಾರದೆ ಮರಿ ಹಕ್ಕಿ ಹಾರಬಹುದೇ..? ಮಕ್ಕಳ ಬೆಳವಣಿಗೆಯಲ್ಲಿ ತಂದೆ- ತಾಯಿಯರ ಪಾತ್ರ ಅತ್ಯಂತ ಮಹತ್ವದ್ದು’ ಎಂದು ತಿಳಿಸಿದರು. ಮಕ್ಕಳು ನೃತ್ಯದ ಮೂಲಕ ಹಾಗೂ ಬಣ್ಣದ ಬಟ್ಟೆಗಳ ಉಡುಗೆ ತೊಡುಗೆಗಳ ಮೂಲಕ ವೇದಿಕೆಯಲ್ಲಿ ಪುಟಾಣಿ ಹೆಜ್ಜೆಗಳನ್ನಿಟ್ಟು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದರು. ಎಳೆವೆಯಲ್ಲೇ ಮಕ್ಕಳಲ್ಲಿ ಸಭಾಕಂಪನದ ಅನುಭವವನ್ನು ತೊಡೆದು ಹಾಕಬೇಕೆಂಬ ಅಂಜಲಿ ಮೊಂಟೆಸ್ಸೂರಿ ಶಾಲೆಯ ಪ್ರಯತ್ನ ಫಲ ಕೊಟ್ಟಿತು. ಅಂಜಲಿ ಮೊಂಟೆಸ್ಸೂರಿ ಶಾಲೆಯ ಪ್ರತಿನಿಧಿ ಗೀತಾಂಜಲಿ ಟಿ.ಜಿ ಹಾಗೂ ಅಂಜಲಿ ಮೊಂಟೆಸ್ಸೂರಿ ಶಾಲೆಯ ಶುಭಕರ ಬಿ.ಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಇವರಿಗೆ ಪ್ರತಿ ಮಗುವಿನ ಪೋಷಕರು ಕೂಡ ಸಾಥ್ ನೀಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ಸಿಇಒ ಕೆ.ಟಿ ವಿಶ್ವನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.













