ನ್ಯೂಸ್ ನಾಟೌಟ್: ಓಮ್ನಿಯಲ್ಲಿ ಬಂದ ಮೂವರು ದುಷ್ಕರ್ಮಿಗಳು 16 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಬಾಲಕಿ ಶಾಲೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಓಮ್ನಿಯಲ್ಲಿ ಬಂದ ಮೂವರು ಆಗಂತುಕರು ಸ್ಕೂಟಿಯನ್ನು ತಡೆದು ನಿಲ್ಲಿಸಿ ಓಮ್ನಿಯೊಳಗೆ ಬಾಲಕಿಯನ್ನು ಎಳೆದೊಯ್ಯಲು ನೋಡಿದ್ದಾರೆ. ಈ ವೇಳೆ ಆಗಂತುಕರು ಮುಖ ಮುಚ್ಚಿಕೊಂಡಿದ್ದರು. ಬಾಲಕಿ ಪ್ರತಿರೋಧ ತೋರಿದಾಗ ಎಡ ಕೈಗೆ ನಾಲ್ಕು ಸಲ ಚಾಕುವಿನಿಂದ ಇರಿದಿದ್ದಾರೆ.
ಗಾಯಗಳು ಗಂಭೀರ ಪ್ರಮಾಣದ್ದಾಗಿಲ್ಲ, ಯಾವುದೇ ಹೊಲಿಗೆಯನ್ನು ಹಾಕಿರುವುದಿಲ್ಲ. ಬಾಲಕಿ ಪೋಷಕರೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.













