ನ್ಯೂಸ್ ನಾಟೌಟ್ : ಗಣಿ ಜಿಲ್ಲೆ ಬಳ್ಳಾರಿಯ ಒಡಲಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆಗಳು (ಅಸ್ಥಿಪಂಜರ) ಪತ್ತೆಯಾಗಿವೆ.
ಕಳೆದ ಒಂದು ವಾರದಿಂದ ಇಲ್ಲಿ ಉತ್ಖನನ ನಡೆಯುತ್ತಿದ್ದು, ಆರಂಭದಲ್ಲಿ ಮಾನವನ ಮೂಳೆಯೊಂದು ಪತ್ತೆಯಾಗಿತ್ತು. ಕುತೂಹಲಗೊಂಡು ಮಣ್ಣನ್ನು ಮತ್ತಷ್ಟು ಆಳವಾಗಿ ಅಗೆದಾಗ ಬರೋಬ್ಬರಿ 5.5 ಅಡಿ ಉದ್ದದ ಪೂರ್ಣ ಪ್ರಮಾಣದ ಮಾನವ ಅಸ್ಥಿಪಂಜರ ಕಂಡುಬಂದಿದೆ. ಅಚ್ಚರಿ ಎಂಬಂತೆ, ಇದರ ಪಕ್ಕದಲ್ಲೇ ಮತ್ತೊಂದು ಅಸ್ಥಿಪಂಜರ ಕೂಡ ಪತ್ತೆಯಾಗಿದ್ದು, ಇತಿಹಾಸ ತಜ್ಞರ ಹುಬ್ಬೇರಿಸಿದೆ.
ಈ ಪಳೆಯುಳಿಕೆಗಳು ನವಶಿಲಾಯುಗ (Neolithic) ಹಾಗೂ ಸೂಕ್ಷ್ಮ ಶಿಲಾಯುಗಕ್ಕೆ (Microlithic) ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್ ಸುಗಂಧಿ ಅವರ ಪ್ರಕಾರ, “ಇವು ಸುಮಾರು 3000 ದಿಂದ 5000 ವರ್ಷಗಳಷ್ಟು ಹಳೆಯದಾಗಿರುವ ಸಾಧ್ಯತೆಯಿದೆ. ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿರುವುದು ಇಲ್ಲಿನ ವಿಶೇಷವಾಗಿದೆ,” ಎಂದು ತಿಳಿಸಿದ್ದಾರೆ.













