ನ್ಯೂಸ್ ನಾಟೌಟ್ : ಸರಣಿ ರಜೆಗಳ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ. ಹಗಲು–ರಾತ್ರಿ ಎನ್ನದೇ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.
ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮನದಿಂದಾಗಿ ನಾಲ್ಕು ದಿನಗಳಲ್ಲಿ ಇಲ್ಲಿನ ಒಟ್ಟು ಆದಾಯ 4 ಕೋಟಿ ರೂಪಾಯಿಗೂ ಮೀರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಈ ಆದಾಯದಲ್ಲಿ ಹುಂಡಿ ಸಂಗ್ರಹ, ವಿವಿಧ ಸೇವೆಗಳ ರಸೀದಿ ಮೊತ್ತ, ಅನ್ನದಾನಕ್ಕೆ ಬಂದ ದೇಣಿಗೆ, ವಸತಿ ಛತ್ರಗಳ ಬಾಡಿಗೆ, ಹರಿಕೆ ರೂಪದಲ್ಲಿ ಸಲ್ಲಿಸಿದ ಚಿನ್ನ–ಬೆಳ್ಳಿ ಸೇರಿದಂತೆ ಇತರ ಅಮೂಲ್ಯ ವಸ್ತುಗಳ ಮೌಲ್ಯಗಳೂ ಸೇರಿಕೊಂಡಿವೆ ಎಂದು ದೇವಳದ ಮೂಲಗಳು ತಿಳಿಸಿವೆ.
ಭಕ್ತರ ಅನುಕೂಲಕ್ಕಾಗಿ ಅನ್ನಪ್ರಸಾದ ಭೋಜನ ಶಾಲೆಯ ಜೊತೆಗೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿಯೂ ಬಫೆ(ಊಟ) ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರ ನಡುವೆ ಸಾವಿರಾರು ಭಕ್ತರು ಸುಗಮವಾಗಿ ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಸುತ್ತಮುತ್ತಲಿನ ರಸ್ತೆ, ರಥ ಬೀದಿ ಹಾಗೂ ಪಾರ್ಕಿಂಗ್ ಪ್ರದೇಶಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದವು.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಒಳಾಂಗಣದಲ್ಲಿ ಕಾರ್ಯನಿರ್ವಹಿಸಿ ಭಕ್ತರ ಸುಗಮ ದರ್ಶನಕ್ಕೆ ಸಿಬ್ಬಂದಿಗೆ ನಿರಂತರ ಮಾರ್ಗದರ್ಶನ ನೀಡಿದರು. ಇದೇ ವೇಳೆ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಯೇಸುರಾಜ್ ಅವರು ಪ್ರವೇಶ ದ್ವಾರ ಹಾಗೂ ಹೊರಾಂಗಣದಲ್ಲಿ ಸಿಬ್ಬಂದಿ ದಳದೊಂದಿಗೆ ಕಾರ್ಯನಿರ್ವಹಿಸಿ ಜನಸಂದಣಿ ನಿಯಂತ್ರಣ ಹಾಗೂ ದರ್ಶನ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.













