ನ್ಯೂಸ್ ನಾಟೌಟ್: “ಗಣರಾಜ್ಯೋತ್ಸವದ ಅರ್ಥ, ಅರ್ಥದ ವ್ಯಾಪ್ತಿ ಮತ್ತು ಮಹತ್ವವನ್ನು ತಿಳಿದು ನಮ್ಮ ಕರ್ತವ್ಯಗಳನ್ನು ಪಾಲಿಸಿ ಮುನ್ನಡೆಯಬೇಕು. ದೇಶದ ನಾಗರಿಕರಾಗಿ ನಮ್ಮ ಜವಾಬ್ದಾರಿ ತುಂಬಾ ಇದೆ. ವಿದ್ಯಾರ್ಥಿಗಳಾಗಿರುವ ನಮಗೆ ಅಧ್ಯಯನ ಮಾಡುವುದು ಮತ್ತು ಸಾಮಾಜಿಕ ಬದ್ಧತೆಗೆ ನಮ್ಮನ್ನು ತೊಡಗಿಸಿಕೊಳ್ಳುವುದು ಹಾಗೂ ಇದೆಲ್ಲದರ ಜೊತೆಗೆ ನಾವು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಂಧುತ್ವದಿಂದ ಸೇರಿಕೊಂಡು ಬಾಳಿದರೆ ಜಗತ್ತು ಸುಖಮಯವಾಗುತ್ತದೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ವಿದ್ಯಾಶಾಂಭವ ಪಾರೆ ತಿಳಿಸಿದರು.
ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ” ಗಣರಾಜ್ಯೋತ್ಸವ ಎಂಬುದು ಸ್ವಾತಂತ್ರ್ಯ ದಿನಾಚರಣೆಗೆ ಸಂವಾದಿಯಾಗಿರುವ ಇನ್ನೊಂದು ಆಚರಣೆಯಾಗಿದೆ. ಅನ್ಯ ದೇಶಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯೇ ಪ್ರಧಾನ ಆಚರಣೆಯಾಗಿರುವಾಗ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ ಗಣರಾಜ್ಯೋತ್ಸವ ಆಚರಣೆಯು ಪ್ರಮುಖವೆನಿಸಿದೆ. ಭಾರತವನ್ನು ಗಣತಂತ್ರವನ್ನಾಗಿ ರೂಪಿಸಲಾಗಿದೆ. ಸಂವಿಧಾನವನ್ನೂ ರಚಿಸಲಾಗಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ಅಧಿಕಾರವಿದೆ. ನಮ್ಮ ಆಡಳಿತಗಾರರನ್ನು ಚುನಾಯಿಸುವ, ಕಾಲ ಕಾಲಕ್ಕೆ ಬದಲಾಯಿಸುವ ಅಧಿಕಾರ ಪ್ರಜೆಗಳ ಕೈಯಲ್ಲಿದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆದಾಗ ಅದನ್ನು ಪ್ರತಿಭಟಿಸುವ ಹಕ್ಕು ನಮಗಿದೆ. ಭಾರತದಲ್ಲಿ ಸ್ವಾತಂತ್ರ ಮತ್ತು ನ್ಯಾಯಪರ ಪ್ರಜೆಗಳಾಗಿ ಬಾಳಬೇಕು” ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಗೀತ ಗಾಯನ ಕಾರ್ಯಕ್ರಮವು ನಡೆಯಿತು. ರಥಸಪ್ತಮಿ ಆಚರಣೆಯ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವು ಡಾ. ದಾಮ್ಲೆಯವರ ಮಾರ್ಗದರ್ಶನದಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿ, ಶಿಕ್ಷಕಿ ಸವಿತಾ ಎಂ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸರ್ವರಿಗೂ ಸಿಹಿ ತಿಂಡಿ ವಿತರಿಸಲಾಯಿತು.













