ನ್ಯೂಸ್ ನಾಟೌಟ್ : ರಜನಿಕಾಂತ್ ಭಾರತದ ಸೂಪರ್ ಸ್ಟಾರ್ ನಟ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ರಜನೀಕಾಂತ್. ಈಗಲೂ ಸಹ ರಜನೀಕಾಂತ್ ಅವರ ಕಾಲ್ಶೀಟ್ಗಾಗಿ ನಿರ್ಮಾಪಕರು ಕಾದು ನಿಂತಿದ್ದಾರೆ.
ಆದರೆ 37 ವರ್ಷಗಳ ಹಿಂದೆ ರಜನೀಕಾಂತ್ ಮಾತ್ರವಲ್ಲ ಇನ್ನೂ ಕೆಲವು ದೊಡ್ಡ ಸ್ಟಾರ್ ನಟರುಗಳನ್ನು ಹಾಕಿಕೊಂಡು ಭಾರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು, ಆದರೆ ಆ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಆದರೆ ಇದೀಗ 37 ವರ್ಷಗಳ ಬಳಿಕ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ.
ನಟಿ ರೀನಾ ರಾಯ್ ಅವರ ಸಹೋದರ ರಾಜಾ ರಾಯ್ ಅವರು 1989 ರಲ್ಲಿ ನಿರ್ಮಾಣ ಮಾಡಿದ್ದ ಸಿನಿಮಾ ‘ಹಮ್ ಮೇ ಶೆಹೆನ್ಶಾ ಕೌನ್’ ಇದೀಗ ಸುಮಾರು ನಾಲ್ಕು ದಶಕಗಳ ಬಳಿಕ ಬಿಡುಗಡೆ ಆಗುತ್ತಿದೆ. ರಜನೀಕಾಂತ್ ಮಾತ್ರವೇ ಅಲ್ಲದೆ ಆಗ ಸೂಪರ್ ಸ್ಟಾರ್ ಬಾಲಿವುಡ್ ನಟ ಶತೃಘ್ನ ಸಿನ್ಹಾ, ಸ್ಟಾರ್ ನಟಿ ಹೇಮಾ ಮಾಲಿನಿ, ಖ್ಯಾತ ವಿಲನ್ ಅಮರೀಶ್ ಪುರಿ, ಪ್ರೇಮ್ ಚೋಪ್ರಾ ಇನ್ನೂ ಹಲವರು ಸಿನಿಮಾನಲ್ಲಿ ನಟಿಸಿದ್ದರು.
ಹಮ್ ಮೇ ಶೆಹೆನ್ಶಾ ಕೌನ್’ ಸಿನಿಮಾವನ್ನು ಆಗಿನ ಜನಪ್ರಿಯ ನಿರ್ದೇಶಕ ಹರ್ಮೇಶ್ ಮಲ್ಹೋತ್ರಾ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಸಂಗೀತ ನೀಡಿದ್ದಿದ್ದು ಲಕ್ಷ್ಮಿಕಾಂತ್ ಪ್ಯಾರೇಲಾಲ್, ಸಿನಿಮಾಕ್ಕೆ ಡೈಲಾಗ್ ಬರೆದಿದ್ದು ಸಲ್ಮಾನ್ ಖಾನ್ ತಂದೆ ಸಲೀಂ, ಸರೋಜ್ ಖಾನ್ ನೃತ್ಯ ನಿರ್ದೇಶಕಿ. ಅದ್ಧೂರಿ ತಾರಾಗಾಣ, ಅದ್ದೂರಿ ಸೆಟ್ಗಳನ್ನು ಹಾಕಿ ಬಲು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದ್ದ ಸಿನಿಮಾವು ಅನಿವಾರ್ಯ ಕಾರಣಗಳಿಂದ ಪೂರ್ಣಗೊಂಡಿರಲಿಲ್ಲ. ಆದರೆ ಇದೀಗ ಎಐ ಬಳಸಿ ಸಿನಿಮಾವನ್ನು ಪೂರ್ತಿ ಮಾಡಲಾಗಿದ್ದು, ಬಿಡುಗಡೆಗೆ ಸಜ್ಜು ಮಾಡಲಾಗಿದೆ.













