ನ್ಯೂಸ್ ನಾಟೌಟ್ : ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಪ್ರಯಾಣಿಕರಿಂದ
ಟಿಕೆಟ್ ಹಣ ಹಾಕಿಸಿಕೊಂಡು ಬೆಂಗಳೂರು ಮಹಾನಗರ ಸಾರಿಗೆ
ನಿಗಮ (ಬಿಎಂಟಿಸಿ)ದ ಮೂವರು ಕಂಡಕ್ಟರ್ಗಳು ಇದೀಗ ಸಿಕ್ಕಿಬಿದ್ದಿದ್ದಾರೆ.
ಯುಪಿಐ ಸ್ಕ್ಯಾನರ್ ಟಿಕೆಟ್ ವ್ಯವಸ್ಥೆ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ವಾಹಕರನ್ನು
ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ನಿರ್ವಾಹಕ ಸುರೇಶ್ (ಘಟಕ 23) ಚಾಲಕ-ನಿರ್ವಾಹಕ ಮಂಚೇಗೌಡ (ಘಟಕ-3), ನಿರ್ವಾಹಕ ಅಶ್ವಾಕ್ಖಾನ್(ಘಟಕ-14) ಸೇವೆಯಿಂದ
ಅಮಾನತುಗೊಂಡವರು.
ಬಿಎಂಟಿಸಿ ಸಂಸ್ಥೆಯು ಚಿಲ್ಲರೆ ಸಮಸ್ಯೆ ಪರಿಹಾರದ ಭಾಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನರನ್ನು ಪ್ರತಿ ಬಸ್ಗಳಲ್ಲಿ ಅಳವಡಿಸಿದೆ. ಆದರೆ, ಈ ನಿರ್ವಾಹಕರು ಟಿಕೆಟ್ ನೀಡುವಾಗ ಬಿಎಂಟಿಸಿಯ ಅಧಿಕೃತವಾದ ಯುಪಿಐ ಸ್ಕ್ಯಾನರ್ ಬಳಸದೆ ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ಸಾವಿರಾರು ರೂಪಾಯಿ ಟಿಕೆಟ್ ಮೊತ್ತವನ್ನು ಪಾವತಿಸಿಕೊಂಡು ದುರ್ಬಳಕೆ ಮೂಲಕ ನಿಗಮದ ಹಣಕಾಸು ಶಿಸ್ತು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.













