ನ್ಯೂಸ್ ನಾಟೌಟ್: ಕಾಡಿನ ಸಂಪತ್ತನ್ನು ಲೂಟಿ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಸಂಪಾಜೆ ಅರಣ್ಯ ತನಿಖಾ ಠಾಣೆ ಯಶಸ್ವಿಯಾಗಿದೆ.
ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳು , ಮಡಿಕೇರಿ ಉಪ ವಿಭಾಗದ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ (ಜ.15) ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಟಾಟಾ ಏಸ್ ವಾಹನ ತಡೆದು ಪರಿಶೀಲನೆ ನಡೆಸಿದಾಗ ಅಡಿಭಾಗದಲ್ಲಿ ಭತ್ತದ ಹೊಟ್ಟು ಚೀಲ ಹಾಕಿ ಅದರ ಅಡಿಯಲ್ಲಿ ಬೀಟ ಮರಗಳ 25 ನಾಟ = 2.862 ಘನ ಮೀಟರ್ ಕಂಡು ಬಂದಿದೆ. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ನಾಪೋಕ್ಲಿನ ಬಿಎಂ ಸಜನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಮತ್ತೂರ್ವ ಆರೋಪಿ ಸಿದ್ದಾಪುರದ ಅಬ್ದುಲ್ ಅಬ್ಬುಟ್ಟಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ಗೌಡ, ಗಸ್ತು ಅರಣ್ಯ ಪಾಲಕರಾದ ಕಾರ್ತಿಕ್ ಡಿ, ನಾಗರಾಜ್ ಎಸ್, ಸಿದ್ದರಾಮ ನಾಟಕರ್ ಮತ್ತು ಇಲಾಖೆಯ ವಾಹನ ಚಾಲಕ ಭುವನೇಶ್ವರ್ , ರಾಜೇಶ್ ಪಾಲ್ಗೊಂಡಿದ್ದರು.













