ನ್ಯೂಸ್ ನಾಟೌಟ್ : ಹೆಚ್ಚಿನ ಜನರಿಗೆ ವಿಮಾನಗಳಲ್ಲಿ ಪ್ರಯಾಣಿಸುವುದು ಕನಸು. ಇನ್ನೂ ಕೆಲವರಿಗೆ ಒಂದು ಬಾರಿಯಾದರೂ ಹಡಗುಗಳಲ್ಲಿ ಓಡಾಡುವುದು ಒಂದು ರೀತಿಯ ಎಂಜಾಯ್. ದುಡ್ಡಿದ್ದವರು, ಉದ್ಯಮಿಗಳು ನಿತ್ಯವೂ ವಿಮಾನದಲ್ಲಿ ಓಡಾಡುತ್ತಾರೆ. ವ್ಯಾಪಾರಸ್ಥರು ಹಡಗುಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ.
ಆದರೆ ಇಲ್ಲೊಬ್ಬರು ಕಳೆದ 25 ವರ್ಷಗಳಿಂದ ಹಡಗಿನಲ್ಲಿಯೇ ವಾಸಿಸುತ್ತಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಭೂಮಿಯ ಮೇಲೆ ವಾಸ ಮಾಡಿಯೇ ಇಲ್ಲ. ಅಷ್ಟೇ ಅಲ್ಲ ಇವರಿಗೆ ಭೂಮಿಯ ಮೇಲೆ ಒಂದು ಸ್ವಂತ ಮನೆ ಬಿಡಿ ಬಾಡಿಗೆ ಮನೆ ಸಹ ಹೊಂದಿಲ್ಲ ಅಂದರೆ ನಿಮಗೆ ಆಶ್ಚರ್ಯವಾಗಬಹುದು.
ಇವರ ಹೆಸರು ಮಾರಿಯೋ ಸಾಲ್ಸೆಡೊಗೆ. ಫ್ಲೋರಿಡಾ ಮೂಲದ ಮಾರಿಯೋ ಹಣಕಾಸು ಸಲಹೆಗಾರ. ತಮ್ಮ ಸಂಪೂರ್ಣ ಜೀವನವನ್ನೇ ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಚಲಿಸುತ್ತಾ ಸಾಗರದಲ್ಲಿಯೇ ಕಳೆದ 25 ವರ್ಷಗಳಿಂದ ಕಾಲ ಕಳೆಯತ್ತಿದ್ದಾರೆ.
ಇವರು ಯಾವುದೇ ಮನೆಗೆ ಬಾಡಿಗೆ ಕಟ್ಟಲ್ಲ, ಆಸ್ತಿ ತೆರಿಗೆ ಇಲ್ಲ ಅಥವಾ ಯುಟಿಲಿಟಿ ಬಿಲ್ ಕಟ್ಟುವುದಿಲ್ಲ. ರಾಯಲ್ ಕೆರಿಬಿಯನ್ ಹಡಗುಗಳ ಕ್ಯಾಬಿನ್ ನಲ್ಲಿಯೇ ಇವರ ಜೀವನ ತೇಲುತ್ತಾ ನಡೆಯುತ್ತಿದೆ.
ಮಾರಿಯೋ ಸಾಲ್ಸೆಡೋ ಜೀವನ ಆರಂಭವಾಗಿದ್ದು 1990ರ ದಶಕದಲ್ಲಿ. ಆಗಾಗ ಹಡಗಿನಲ್ಲಿ ಪ್ರಯಾಣಿಸುತ್ತ, ಹೋಟೆಲ್ಗಳಲ್ಲಿ ವಾಸಿಸುತ್ತಿದ್ದ ಇವರಿಗೆ 2000 ನೇ ಇಸವಿಗೆ ವೇಳೆಗೆ ಭೂಮಿ ಮೇಲಿನ ಹೋಟೆಲ್, ಲಾಡ್ಜ್ಗಳಿಗಿಂತ ಹಡಗುಗಳ ಜೀವನ ಐಷಾರಾಮಿ ಎನಿಸತೊಡಗಿತು. ಯೌವನದ ದಿನಗಳಲ್ಲಿ ಹಣಕಾಸಿನ ಒತ್ತಡದಿಂದ ಕುಟುಂಬಕ್ಕೆ ಸಮಯವಿಲ್ಲದೆ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಮಾರಿಯೋ, ಒಂದು ಅದನ್ನೆಲ್ಲ ಬಿಟ್ಟು ಸಮುದ್ರದಲ್ಲಿಯೇ ಜೀವನ ಮಾಡಲು ನಿರ್ಧರಿಸಿಬಿಟ್ಟರು.
ಕಳೆದ 25 ವರ್ಷಗಳಲ್ಲಿ ಮಾರಿಯೋ 1,154 ಸಮುದ್ರಯಾನ ಪೂರ್ಣಗೊಳಿಸಿದ್ದಾರೆ. ಅವರು ಸಮುದ್ರದಲ್ಲಿ ವಾರ್ಷಿಕವಾಗಿ $70,000 ನಿಂದ $100,000 ವರೆಗೆ ಖರ್ಚು ಮಾಡುತ್ತಾರಂತೆ. ಇದರಲ್ಲಿ ಆಹಾರ, ವಸತಿ, ಮನರಂಜನೆ, ಮನೆಗೆಲಸ ಎಲ್ಲವೂ ಸೇರಿದೆ.
ಸಾಲ್ಸೆಡೊ ಹಡಗಿನಲ್ಲಿ ಸಿಬ್ಬಂದಿ, ಪ್ರಯಾಣಿಕರ ಜೊತೆ ಬೆರೆಯುತ್ತಾರೆ. ಬಾರ್ನಲ್ಲಿ ವಿಸ್ಕಿ ಹೀರುತ್ತಾರೆ. ಆಗಾಗ ಸಮುದ್ರ ದೃಶ್ಯ ಸೆರೆ ಹಿಡಿಯುತ್ತಾರೆ.
ಮಾರಿಯೋ ಸಾಲ್ಸೆಡೊಗೆ ಹಡಗಿನಲ್ಲಿ ವಾಸಿಸುವುದು ಪರಮ ಸ್ವಾತಂತ್ರ್ಯ ಎನ್ನುತ್ತಾರೆ. ಕಸ ತೆಗೆಯಬೇಕಿಲ್ಲ, ಸ್ವಚ್ಛಗೊಳಿಸಬೇಕಿಲ್ಲ, ಲಾಂಡ್ರಿ ಮಾಡಬೇಕಿಲ್ಲ ಇದೊಂದು ಪರಮ ಸ್ವಾತಂತ್ರ್ಯ ಎನ್ನುತ್ತಾರೆ. ದಿ ಮ್ಯಾನ್ ಹೂ ಲಿವ್ಸ್ ಆನ್ ಕ್ರೂಸ್ ಶಿಪ್ಸ್ ಸಾಕ್ಷ್ಯಚಿತ್ರದಲ್ಲಿ ಸಾಲ್ಸೆಡೊ ಈ ವಿಚಾರ ಹಂಚಿಕೊಂಡಿದ್ದಾರೆ.













