ನ್ಯೂಸ್ ನಾಟೌಟ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ಬೆಳವಣಿಗೆ ನಡೆದಿದೆ. ಎಸ್ಐಟಿ ತಂಡವು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಬೃಹತ್ ವರದಿಯ ಒಂದು ಭಾಗ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ. ಅವರ ಕೈ ಸೇರಿದೆ.
ಎಸ್ಐಟಿ ತನಿಖೆಯ ಭಾಗವಾಗಿ ನ 20ರಂದು ನ್ಯಾಯಾಲಯಕ್ಕೆ ಬರೋಬ್ಬರಿ 3,923 ಪುಟಗಳ ಸುದೀರ್ಘ ವರದಿ ಸಲ್ಲಿಸಿತ್ತು. ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಸ್ಐಟಿ ನ್ಯಾಯಾಲಯದ ಅನುಮತಿ ಕೋರಿತ್ತು. ಈ ಪ್ರಕರಣದಲ್ಲಿ ತನಿಖೆಯ ಸೂಕ್ಷ್ಮತೆಯನ್ನು ಪರಿಗಣಿಸಿ ವರದಿಯನ್ನು ಬಹಿರಂಗಪಡಿಸದಂತೆ ಮನವಿ ಮಾಡಿತ್ತು. ಎಸ್ಐಟಿ ಸಲ್ಲಿಸಿದ್ದ ಈ ವರದಿಯ ಪ್ರತಿಯನ್ನು ಪಡೆಯಲು ಜಯಂತ್ ಟಿ. ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಾರಂಭದಲ್ಲಿ ಎಸ್ಐಟಿ ಆಕ್ಷೇಪಣೆಯ ಮೇರೆಗೆ ನ್ಯಾಯಾಲಯವು ಪ್ರತಿ ನೀಡಲು ನಿರಾಕರಿಸಿತ್ತು. ಆದರೆ, ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ಬೆಳ್ತಂಗಡಿ ನ್ಯಾಯಾಲಯದಲ್ಲಿ ಜಯಂತ್ ಪರವಾಗಿ ಪ್ರಬಲವಾದ ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ ವರದಿಯ ಪ್ರತಿ ನೀಡಲು ಸಮ್ಮತಿಸಿತ್ತು.













