ನ್ಯೂಸ್ ನಾಟೌಟ್: ಕನ್ನಡ ಶಾಲೆಗಳ ಪೈಕಿಯೇ ದಿ ಬೆಸ್ಟ್ ಅನ್ನುವ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿರುವ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಡಿ.25ರಂದು ನಡೆಯಿತು. ಉನ್ನತ ಶಿಕ್ಷಣ ಪಡೆಯುತ್ತಿರುವ ಸ್ನೇಹ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಉದ್ಯೋಗಗಳಲ್ಲಿ ಇರುವ ಹಿರಿಯ ವಿದ್ಯಾರ್ಥಿಗಳು ಸಂಸ್ಥೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಖುಷಿಯಿಂದ ಪಾಲ್ಗೊಂಡರು. ಸ್ನೇಹ ಶಾಲೆಯಲ್ಲಿ ಕಲಿತ ದಿನಗಳು, ಕಲಿತ ಮೌಲ್ಯಗಳು, ಶಿಸ್ತು, ಪರಿಸರ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಸ್ಮರಿಸಿಕೊಂಡರು. ಹಿರಿಯ ವಿದ್ಯಾರ್ಥಿಗಳಾದ ಅವಿನಾಶ್ ಆರ್, ಸೀಮ್ ಶಂಕರ್ ಯು. ವಿ ಮತ್ತು ಶ್ರೀಶ ಕೆ ಇವರನ್ನು ಗುರುತಿಸಿ, ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸ್ನೇಹದಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಪ್ರಯತ್ನ ನಿರಂತರವಾಗಿದೆ. ಕನ್ನಡದಲ್ಲಿ ಕಲಿಸುವುದರ ಜೊತೆಗೆ ಇಂಗ್ಲಿಷ ಅನ್ನು ಕೂಡ ನಾವು ಚೆನ್ನಾಗಿ ಕಲಿಸಿಕೊಡುತ್ತಿದ್ದೇವೆ. ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ ಎಂಬಂತೆ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿತು ಸಾಧನೆಗೈದವರಾಗಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಕೊಡುಕೊಳ್ಳುವಿಕೆಯ ಸ್ನೇಹ ಗಟ್ಟಿಯಾಗಬೇಕು” ಎಂದು ಹೇಳಿದರು. ಪರಿಸರ ಪ್ರಜ್ಞೆಗೆ ಸಂಬಂಧಿಸಿದಂತೆ ನಡೆದ ಮರಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ ಸ್ನೇಹದ ಹಿರಿಯ ವಿದ್ಯಾರ್ಥಿ ಅಖಿಲ್ ಕೆ. ಎಸ್ ಪ್ರಥಮ ಬಹುಮಾನವ ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಸ್ಥೆಯ ಆಡಳಿತಾಧಿಕಾರಿ ಅಕ್ಷರ .ಸಿ ದಾಮ್ಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ ಜಿ.ಸಿ ವಂದಿಸಿದರು. ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.













