ನ್ಯೂಸ್ ನಾಟೌಟ್ : ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ, ಮುಟ್ಟು ಆದವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ, ತಾರತಮ್ಯ ಮಾಡುವ ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವವರಿಗೆ – 5 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ
ನಿರ್ಧರಿಸಿದೆ.
‘ರಾಜ್ಯ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸೇವೆಗಳಲ್ಲಿ ತೊಡಗಿರುವ ಮಹಿಳೆಯರು ಮುಟ್ಟಾದರೆ, ಆ ಅವಧಿಯಲ್ಲಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಈ ಮಸೂದೆಯನ್ನು ರೂಪಿಸಲಾಗಿದೆ. ಮಸೂದೆಯ ಅನ್ವಯ ಹುಡುಗಿಯರು, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಮುಟ್ಟಿನ ರಜೆ ಪಡೆಯಲು ಅರ್ಹರು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
‘ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಮುಟ್ಟಿನ ರಜೆಯನ್ನು ಮಂಜೂರು ಮಾಡಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಋತುಚಕ್ರ ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗಲಿದೆ. ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟು 12 ಮುಟ್ಟಿನ ರಜೆ ಪಡೆಯಬಹುದು ಎಂದೂ ಈ ಆದೇಶದಲ್ಲಿ ವಿವರಿಸಿದೆ. ಈ ಅದೇಶಕ್ಕೆ ಕಾನೂನು ಬಲ ನೀಡಲು ಕಾಯ್ದೆ ರೂಪಿಸಲಾಗುತ್ತಿದೆ’
ಎಂದೂ ಮೂಲಗಳು ತಿಳಿಸಿವೆ.













