ನ್ಯೂಸ್ ನಾಟೌಟ್ : ಮಾದಕವಸ್ತು ಮಾರಾಟಗಾರರು, ಸೇವನೆ ಮಾಡುವವರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ
ಯುದ್ಧ ಆರಂಭಿಸಿದೆ, ರಾಜ್ಯವನ್ನು ಮಾದಕ ವ್ಯಸನ ಮುಕ್ತ ಮಾಡುವುದೇ ಗುರಿ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ ಹೇಳಿದರು.
ಬೆಂಗಳೂರು ಸಿಟಿ ಪೊಲೀಸ್ ಹಾಗೂ ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್‌ಎಚ್ ವಿಐ) ಸಹಯೋಗದಲ್ಲಿ ಪೌಲ್ ಜಾನ್ ರೆಸಾರ್ಟ್ ಮತ್ತು ಹೊಟೇಲ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ವಿಂಟೇಜ್ ಕಾರ್ ಕ್ಯಾಲಿ ಜಾಗೃತಿ ಅಭಿಯಾನಕ್ಕೆ ವಿಧಾನಸೌಧದ ಮುಂಭಾಗ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಮಾತ್ರವಲ್ಲ ವಿಶ್ವದೆಲ್ಲೆಡೆ ಸಮಾಜ ಮಾದಕ ವ್ಯಸನದ ಜತೆ ಹೋಗುತ್ತಿದೆ. ಮಾದಕ ವಸ್ತುಗಳನ್ನು ಯಾರು ಬೆಂಬಲಿಸುತ್ತಾರೋ ಅವರು ಮನುಷ್ಯರಲ್ಲ. ಜನರ ಜೀವನದ ಜತೆ ಆಟವಾಡುತ್ತಾರೆ. ಅವರ ಭವಿಷ್ಯ, ಆರೋಗ್ಯವನ್ನು ನಾಶ ಮಾಡುತ್ತಾರೆ. ಇದನ್ನು ಮನಗಂಡು ನಮ್ಮ ಸರ್ಕಾರ ಕರ್ನಾಟಕವನ್ನು ಮಾದಕ ವ್ಯಸನ ಮಕ್ತ ರಾಜ್ಯವಾಗಿಸುವ ಬಗ್ಗೆ ಸರ್ಕಾರ ಘೋಷಿಸಿತ್ತು. ಘೋಷಣೆಯಾದ ಕೂಡಲೇ ಕರ್ನಾಟಕ ಮಾದಕ ವ್ಯಸನ ಮುಕ್ತವಾಯಿತು ಎಂದು ಅರ್ಥವಲ್ಲ. ಅದರ ವಿರುದ್ಧ ಯುದ್ಧ ಆರಂಭಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ಯುದ್ಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಾದಕ ವಸ್ತುಗಳ ಬಳಕೆಯಿಂದ ದೂರ ಇರಬೇಕು ಎಂದು ವಿದ್ಯಾರ್ಥಿ ಸಮುದಾಯ ಮತ್ತು ಐಟಿ ಪದವೀಧರರು ಸೇರಿ ಯುವ ಸಮುದಾಯಕ್ಕೆ ಪರಮೇಶ್ವರ್ ಮನವಿ ಮಾಡಿದರು.













