ನ್ಯೂಸ್ ನಾಟೌಟ್: ‘ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಪರೀತ ತೊಡಗಿಸಿಕೊಂಡು ತಮ್ಮ ಅಮೂಲ್ಯ ಸಮಯಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಈ ಸಮಯಗಳನ್ನು ಹಾಳು ಮಾಡುವ ಬದಲು ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ-ದೈಹಿಕ ವಿಕಸನ ಸಾಧ್ಯ’ ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಕೂಟವನ್ನು ಉಧ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಕ್ರೀಡೆಗಳು ಸೇರಿದಂತೆ ಇಂತಹ ಅನೇಕ ರೀತಿಯ ಕ್ರೀಡೆಗಳಿಗೆ ಒತ್ತು ನೀಡುವ ಅಗತ್ಯತೆ ಇದೆ. ಗ್ರಾಮೀಣ ಪ್ರದೇಶದ ಹಲವಾರು ಕ್ರೀಡಾಕೂಟ ನಶಿಸಿದೆ. ವಿದ್ಯಾರ್ಥಿಗಳು ಹಿರಿಯರು ದಿನದಲ್ಲಿ ಕನಿಷ್ಠ ಒಂದು ಗಂಟೆ ಯಾವುದಾದರೊಂದು ರೀತಿಯ ಕ್ರೀಡೆಯಲ್ಲಿ ಪಾಲ್ಗೊಂಡರೆ ದೈಹಿಕವಾಗಿ ಸದೃಢವಾಗಲು ಸಾಧ್ಯ, ಜೊತೆಗೆ ಕ್ರೀಡೆಗಳು ಕೂಡ ಉಳಿಯುವುದಕ್ಕೆ ಸಾಧ್ಯವಿದೆ’ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಮತ್ತೊಮ್ಮೆ ಅತಿಥಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,’ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಜಾತಿ ಮತ ಧರ್ಮ ಮೀರಿದ ಒಗ್ಗಟ್ಟು ಬೆಳೆಯುತ್ತದೆ. ಈ ಕಾರಣದಿಂದ ಸುಳ್ಯ ಕೋಮು ಗಲಭೆಗಳಿಂದ ದೂರವಿದೆ ಎಂದು ತಿಳಿಸಿದರು.
ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಜಾಕೆ ಸದಾನಂದ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ ರೈ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ನಿರ್ದೇಶಕ ಗಂಗಾಧರ ಕಾಳಮನೆ, ಜಾಲ್ಸೂರು ಗ್ರಾ.ಪಂ.ಸದಸ್ಯ ಬಾಬು ಕೆ.ಎಂ., ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ, ಸುಳ್ಯ ತಾಲೂಕು ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ಹಾಜರಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್, ಸುಳ್ಯ ತಾಲೂಕು ಪಿ.ಎಂ.ಪೋಷಣ್ ನಿರ್ದೇಶಕಿ ವೀಣಾ ಎಂ.ಟಿ ಭಾಗವಹಿಸಿದ್ದರು. ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೀಥಲ್ ಯು.ಕೆ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ ವಂದಿಸಿದರು. ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ಮೇರ್ಕಜೆ ಕಾರ್ಯಕ್ರಮ ನಿರೂಪಿಸಿದರು.













