ನ್ಯೂಸ್ ನಾಟೌಟ್ : ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗ ಕಾಮಿಗಳು, ಸ್ತ್ರೀವೇಷಧಾರಿಗಳಿಗೆ ಸಲಿಂಗಕಾಮಕ್ಕೆ ಒತ್ತಡ ಹಾಕಲಾಗುತ್ತದೆ ಎಂಬ ಹೇಳಿಕೆ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರಿಗೆ ಅಪಮಾನಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಇದು ಯಕ್ಷಗಾನ ಕಲೆಗೆ ಮಾಡಿದ ಅಪಮಾನ ಮಾತ್ರವಲ್ಲ, ಕರಾವಳಿಗೆ ಹಾಗೂ ಸಮಸ್ತ ಹಿಂದೂ ಧರ್ಮಕ್ಕೆ ತೋರಿದ ಅಗೌರವ. ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಇದು ಬಹಿರಂಗಗೊಳಿಸಿದೆ’ ಎಂದು ಹೇಳಿದರು.
‘ಕರಾವಳಿಯ ಕಲೆ, ಸಂಸ್ಕೃತಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ಹೀಗೆ ಹೇಳುತ್ತಿರಲಿಲ್ಲ. ಬಿಳಿಮಲೆ ಅವರನ್ನು ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಸರ್ಕಾರ ಕೂಡಲೇ ಕಿತ್ತೊಗೆಯಬೇಕು. ಈ ಕುರಿತು ಪಕ್ಷಾತೀತವಾಗಿ ಹೋರಾಟ ಮಾಡಬೇಕಾದ ಅಗತ್ಯ ಇದೆ’ ಎಂದರು.













