ನ್ಯೂಸ್ ನಾಟೌಟ್ : ಕಾಸರಗೋಡು ಜಿಲ್ಲೆಯ ಬೇಕೂರು ಸಮೀಪದ ಬೊಳ್ಳಾಯಿ ಎಂಬಲ್ಲಿ ಇಳಿಜಾರು ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪೊಂದು ಹಿಮ್ಮುಖವಾಗಿ ಚಲಿಸಿ ಉರುಳಿ ಬಿದ್ದ ಪರಿಣಾಮ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಗಾಯಾಳುಗಳನ್ನು ಜಯಂತಿ ಭಂಡಾರಿ (74) ಮತ್ತು ಪುತ್ರಿ ಸುಮಲತಾ ಶೆಟ್ಟಿ (47) ಎಂದು ಗುರುತಿಸಲಾಗಿದೆ. ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಿಜಾರು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸೊಸೈಟಿಯೊಂದಕ್ಕೆ ಸಂಬಂಧಿಸಿದ ಜೀಪ್, ಹಿಂದಕ್ಕೆ ಚಲಿಸಿ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳಿಗೆ ಬಡಿದು ಸಮೀಪದ ತೋಟಕ್ಕೆ ಉರುಳಿದೆ ಎನ್ನಲಾಗಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಜೀಪಿನಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.













