ನ್ಯೂಸ್ ನಾಟೌಟ್ : ವಿರಾಜಪೇಟೆ ಗೌಡ ಸಮಾಜದ ಸಭಾಭವನ ಕಟ್ಟಲು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರು ಜಾಗ ಮತ್ತು ಕಟ್ಟಡವೊಂದನ್ನು ಖರೀದಿಸಿಕೊಟ್ಟಿದ್ದರು. ಆದರೆ ಆ ಜಾಗದ ದಾಖಲೆ ಪತ್ರ ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ಆಗಿರಲಿಲ್ಲ. ಜಾಗ ಡಾ.ಚಿದಾನಂದ ಮತ್ತು ಡಾ.ರೇಣುಕಾಪ್ರಸಾದ್ ಅವರ ಹೆಸರಲ್ಲಿತ್ತು.
ಇತ್ತೀಚೆಗೆ ಅಲ್ಲಿಯ ಸಮಾಜದವರ ವಿನಂತಿಯ ಮೇರೆಗೆ ಡಾ.ಚಿದಾನಂದ ಮತ್ತು ಡಾ.ರೇಣುಕಾಪ್ರಸಾದ್ರು ಅವರು ಕೆಲವು ಕೋಟಿ ಬೆಲೆಬಾಳುವ ಆ ಜಾಗವನ್ನು ವಿರಾಜಪೇಟೆ ಗೌಡ ಸಮಾಜಕ್ಕೆ ನೀಡಲು ಒಪ್ಪಿ, ತಮ್ಮ ಮಕ್ಕಳಾದ ಅಕ್ಷಯ್ ಕೆ.ಸಿ. ಮತ್ತು ಮೌರ್ಯ ಆರ್.ಪ್ರಸಾದ್ ಅವರಿಗೆ ಪವರ್ ಆಫ್ ಅಟಾರ್ನಿ ನೀಡಿದ ಮೇರೆಗೆ, ಮಕ್ಕಳಿಬ್ಬರೂ ಮಡಿಕೇರಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಆ ಜಾಗವನ್ನು ಗೌಡ ಸಮಾಜಕ್ಕೆ ಬರೆದುಕೊಟ್ಟಿದ್ದರು.ಇದಕ್ಕಾಗಿ ನ.16 ರಂದು ವಿರಾಜಪೇಟೆ ಗೌಡ ಸಮುದಾಯದಲ್ಲಿ ಡಾ.ಕುರುಂಜಿಯವರ ಪುತ್ರರಾದ ಡಾ.ಚಿದಾನಂದ ಹಾಗೂ ಡಾ.ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಕೆ.ವಿ.ಜಿ. ಯವರ ಸಮಾಜ ಸೇವೆ ಪುತ್ರರು ಮುನ್ನಡೆಸುತ್ತಿರುವುದಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಬ್ಬರೂ ಜತೆಯಾಗಿ ಕುಳಿತು ಸನ್ಮಾನ ಸ್ವೀಕರಿಸಿ, ಸಮುದಾಯದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.













