ನ್ಯೂಸ್ ನಾಟೌಟ್ :ಚತುರ್ದಾನ ಪರಂಪರೆಯ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವವು ಇಂದಿನಿಂದ ಆರಂಭವಾಗಲಿದೆ. ನ. 19ರ ವರೆಗೆ ರಾಜ್ಯಮಟ್ಟದ ವಸ್ತು ಪ್ರದರ್ಶನ, ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ನಿತ್ಯವೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳ ಮೂಲಕ ನಡೆಯಲಿದ್ದು, ನ. 20ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನೆರವೇರಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಉತ್ಸವಕ್ಕೆ ಸಿದ್ಧತೆಗಳು ನಡೆದು ಕ್ಷೇತ್ರವು ಸಂಪೂರ್ಣ ಸಿಂಗಾರಗೊಂಡು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಇಂದು ಬೆಳಗ್ಗೆ 9.30ಕ್ಕೆ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.ರಾತ್ರಿ ಹೊಸಕಟ್ಟೆ ಉತ್ಸವನಡೆಯಲಿದೆ. ನ. 16ರಂದು ರಾತ್ರಿ ಕೆರೆ ಕಟ್ಟೆ ಉತ್ಸವ, 17ರಂದು ರಾತ್ರಿ ಲಲಿತೋದ್ಯಾನ ಉತ್ಸವ ನಡೆಯಲಿದೆ.
ನ. 18ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದ್ದು, ಸಚಿವ ಡಾ| ಎಂ.ಬಿ. ಪಾಟೀಲ್ ಸರ್ವಧರ್ಮ ಸಮ್ಮೇಳನದ ಅಧಿವೇಶನ ಉದ್ಘಾಟಿಸಲಿದ್ದು, ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಎ. ಸೂರ್ಯಪ್ರಕಾಶ್ ಪಂಡಿತ್ ಮತ್ತು ಖ್ಯಾತ ಅಂಕಣಕಾರ ತನ್ನೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ.
ನ. 19ರಂದು ಸಂಜೆ 5ಕ್ಕೆ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪ್ರೊ| ಪ್ರೇಮಶೇಖರ ಉದ್ಘಾಟಿಸಲಿದ್ದು, ಪತ್ರಕರ್ತ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.ನ.20ರಂದು ಸಂಜೆ 7ರಿಂದ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.













