ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿಯೊಬ್ಬರು ಸಾವಿಗೀಡಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಂಪಲ ಗ್ರಾಮದ ನಿವಾಸಿ ದಯಾನಂದ (60) ಮೃತ ವ್ಯಕ್ತಿ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸದ್ಯ ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಬೆಳ್ಳಂ ಬೆಳಿಗ್ಗೆ ಅಟ್ಟಾಡಿಸಿ ದಾಳಿ ಮಾಡಿರುವ ಡೆಡ್ಲಿ ನಾಯಿ ಮೃತ ವ್ಯಕ್ತಿಯ ಕಣ್ಣುಗುಡ್ಡೆಯನ್ನೇ ತಿಂದು ಹಾಕಿದೆ.ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪದ ಜನವಸತಿ ಪ್ರದೇಶದಲ್ಲಿ ಘಟನೆ ನಡೆದಿದೆ. ಅವಿವಾಹಿತರಾಗಿದ್ದ ದಯಾನಂದ, ಕುಡಿತದ ಚಟ ಹೊಂದಿದ್ದು ರಾತ್ರಿ ವೇಳೆ ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ತೆರಳಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು.
ಅಂಗಡಿಯೊಂದರ ಮುಂಭಾಗ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್ ಎಂಬುವವರು ನೋಡಿದ್ದಾರೆ. ಆದಾದ ಬಳಿಕ ಬೆಳಗ್ಗೆ 7:30ರ ಸುಮಾರಿಗೆ ಪಕ್ಕದ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆಯೊಂದು ಬಿದ್ದಿರೋದು, ರಕ್ತಸಿಕ್ತವಾಗಿರೋದು ಕಂಡು ಬಂದಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ ಅಂಗಡಿ ಸಮೀಪದ ಮನೆಯೊಂದರ ಮುಂಭಾಗ ದಯಾನಂದ ಮೃತದೇಹ ಪತ್ತೆಯಾಗಿದೆ.













