ನ್ಯೂಸ್ ನಾಟೌಟ್: ಅಕ್ಕಿಯಿಂದ ಬಿರಿಯಾನಿ ತಯಾರಿಸಿ ಬಡಿಸಿದ ನಂತರ, ಅದನ್ನು ಸೇವಿಸಿದ ಜನರಿಗೆ ಫುಡ್ ಪಾಯ್ಸನ್ ಆಗಿ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಆರೋಪಿಸಿ ನಟ ದುಲ್ಕರ್ ಸಲ್ಮಾನ್ ಮತ್ತು ಅಕ್ಕಿಯ ಕಂಪನಿ ಹಾಗೂ ಅದರ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ ಅಕ್ಕಿ ಬ್ರ್ಯಾಂಡ್ನ ರಾಯಭಾರಿ ದುಲ್ಕರ್ ಸಲ್ಮಾನ್, ಮಾಲೀಕ ಮತ್ತು ಕಂಪನಿಯ ವಿರುದ್ಧ ಪತ್ತನಂತಿಟ್ಟ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ನೋಟಿಸ್ ಕಳುಹಿಸಿದೆ. ಡಿಸೆಂಬರ್ 3 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಪತ್ತನಂತಿಟ್ಟ ಮೂಲದ ಪಿ.ಎನ್. ಜಯರಾಜನ್ ಸಲ್ಲಿಸಿದ್ದ ದೂರಿನ ಮೇರೆಗೆ ಈ ನೋಟಿಸ್ ನೀಡಲಾಗಿದೆ. ಪತ್ತನಂತಿಟ್ಟದಲ್ಲಿ ಅಡುಗೆ ಸಂಸ್ಥೆ ನಡೆಸುತ್ತಿರುವ ದೂರುದಾರ ಜಯರಾಜನ್, ಮದುವೆ ಸಮಾರಂಭವೊಂದಕ್ಕಾಗಿ ಬಿರಿಯಾನಿ ತಯಾರಿಸಲು ಅಕ್ಕಿಯನ್ನು ಖರೀದಿಸಿದ್ದರು. ಆದರೆ, ಪ್ಯಾಕಿಂಗ್ ಮೇಲೆ ಪ್ಯಾಕ್ ಮಾಡಿದ ದಿನಾಂಕವಾಗಲಿ ಅಥವಾ ಎಕ್ಸ್ಪೈರಿ ಡೇಟ್ ಆಗಲಿ ನಮೂದಿಸಿರಲಿಲ್ಲ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ಕಿಯಿಂದ ಬಿರಿಯಾನಿ ತಯಾರಿಸಿ ಬಡಿಸಿದ ನಂತರ, ಅದನ್ನು ಸೇವಿಸಿದ ಜನರಿಗೆ ಫುಡ್ ಪಾಯ್ಸನ್ ಆಗಿದೆ. ತಿಂದವರಲ್ಲಿ ಅನೇಕ ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಜಯರಾಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಅಕ್ಕಿಯನ್ನು ಮಾರಾಟ ಮಾಡಿದ ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ.
ಅಕ್ಕಿಯ ಬ್ರ್ಯಾಂಡ್ ರಾಯಭಾರಿಯಾಗಿರುವ ದುಲ್ಕರ್ ಸಲ್ಮಾನ್ ಅವರನ್ನು ಈ ಪ್ರಕರಣ ಪ್ರಮುಖ ಆರೋಪಿಯನ್ನಾಗಿ ಮಾಡಿ ದೂರು ದಾಖಲಿಸಲಾಗಿದೆ. ಜಾಹೀರಾತಿನಲ್ಲಿ ದುಲ್ಕರ್ ಸಲ್ಮಾನ್ ಅವರನ್ನು ನೋಡಿದ ನಂತರ ಈ ಅಕ್ಕಿಯನ್ನು ಖರೀದಿಸಿದೆ ಎಂದು ದೂರುದಾರ ಜಯರಾಜನ್ ಹೇಳಿದ್ದಾರೆ.













