ನ್ಯೂಸ್ ನಾಟೌಟ್ : ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಮತ್ತು ಮಾಜಿ ಸಚಿವ ಹೆಚ್.ವೈ. ಮೇಟಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮೇಟಿ ಅವರಿಗೆ 79 ವರ್ಷ ವಯಸ್ಸಾಗಿತ್ತು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಮೇಟಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿ ಭೇಟಿಯಾಗಿ ಮೇಟಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.
1946, ಅಕ್ಟೋಬರ್ 9ರಂದು ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಜನಿಸಿದ ಮೇಟಿ ಅವರ ಪೂರ್ಣ ಹೆಸರು ಹುಲ್ಲಪ್ಪ ಯಮನಪ್ಪ ಮೇಟಿ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಹಾಲಿ ಶಾಸಕರಾಗಿದ್ದರು. ಪತ್ನಿ ಲಕ್ಷ್ಮೀ ಬಾಯಿ, ಮಕ್ಕಳಾದ ಮಲ್ಲಿಕಾರ್ಜುನ, ಉಮೇಶ, ಬಾಯಕ್ಕ ಹಾಗೂ ಮಾದೇವಿ ಎಂಬುವರನ್ನು ಅಗಲಿದ್ದಾರೆ.
ಬಿಲ್ ಕೆರೂರು ಮಂಡಳ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷನಾಗಿ ರಾಜಕೀಯ ಜೀವನ ಆರಂಭಿಸಿದ ಮೇಟಿ, ನಂತರ ಪಿಎಲ್ಡಿ ಬ್ಯಾಂಕ್ ನಿರ್ದೇಶಕ, ನಂತರದಲ್ಲಿ ಅಧ್ಯಕ್ಷರಾಗಿ ರಾಜಕಾರಣದ ಮುಖ್ಯ ಭೂಮಿಕೆಗೆ ಬಂದರು. ಬಾಗಲಕೋಟೆ ಮಾಜಿ ಶಾಸಕ ದಿವಂಗತ ಜಿ.ವಿ. ಮಂಟೂರು ಅವರು ಮೇಟಿ ಅವರ ರಾಜಕೀಯ ಗುರುಗಳು.
1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡರು. 1994 ರಲ್ಲಿ 2ನೇ ಸಲ ಗುಳೇದಗುಡ್ಡದಿಂದ ಜನತಾದಳದಲ್ಲಿ ಗೆಲುವು ಸಾಧಿಸಿದರು. ದೇವೇಗೌಡರ ಸಂಪುಟದಲ್ಲಿ ಮೊದಲ ಬಾರಿಗೆ ಅರಣ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾಗಿದ್ದಾಗಲೇ 1996 ರಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಗೆಲುವು ಕಂಡರು. ಮೊದಲ ಸಲ ದಿಲ್ಲಿ ಪಾರ್ಲಿಮೆಂಟ್ಗೆ ತೆರಳಿದ ಎಚ್.ವೈ.ಮೇಟಿ, ದೇವೇಗೌಡರು ಪ್ರಧಾನಿ ಆದಾಗ ಸಂಸದರಾಗಿದ್ದರು.
1998ರಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಜನತಾ ದಳದಿಂದ ಸೋಲು ಕಂಡರು. ನಂತರ ಜನತಾ ಪರಿವಾರ ಇಬ್ಭಾಗವಾದಾಗ ಸಿದ್ದರಾಮಯ್ಯ ಜೊತೆಗೆ ಜೆಡಿಎಸ್ನಲ್ಲಿ ಉಳಿದ ಮೇಟಿ, 1999ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡರು. 2004 ರಲ್ಲಿ ಜೆಡಿಎಸ್ ನಿಂದ ಮತ್ತೇ ಗುಳೇದಗುಡ್ಡದಿಂದ ಸ್ಪರ್ಧಿಸಿ ಗೆಲುವು ಕಂಡರು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಈವರೆಗೂ ಎರಡು ಸ್ಥಾನ ಮಾತ್ರ ಗೆದ್ದಿದ್ದು, ಅದರಲ್ಲಿ ಹೆಚ್.ವೈ. ಮೇಟಿ ಒಬ್ಬರು. ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಹೊರ ಬಂದಾಗ ಸ್ವಾಮಿ ನಿಷ್ಠೆ ಮೂಲಕ ಜೆಡಿಎಸ್ ಬಿಟ್ಟು ಮೇಟಿ ಕೂಡ ಹೊರಬಂದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗಿ ಗುಳೇದಗುಡ್ಡ ಕ್ಷೇತ್ರ ಹೋಗಿದ್ದಕ್ಕೆ 2008ರ ಚುನಾವಣೆಗೆ ಮೊದಲ ಬಾರಿ ಕಾಂಗ್ರೆಸ್ನಿಂದ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. 2013 ರಲ್ಲಿ ಮತ್ತೆ ಬಾಗಲಕೋಟೆ ಮತಕ್ಷೇತ್ರದಿಂದ ಗೆಲುವು ಕಂಡರು.
2016 ರಲ್ಲಿ ಸಿದ್ದು ಸಂಪುಟದಲ್ಲಿ ಅಲ್ಪ ಸಮಯ ಅಬಕಾರಿ ಸಚಿವರಾಗಿ ಕೆಲಸ ಮಾಡಿದ ಮೇಟಿ, 2018ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲುಂಡರು. ಈ ಅವಧಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದರು. 2023ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಬಾಗಲಕೋಟೆಯಲ್ಲಿ ಗೆಲುವು ಕಂಡರು. ಸದ್ಯ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು.













