ನ್ಯೂಸ್ ನಾಟೌಟ್ : ಹಾವೇರಿ ಜಿಲ್ಲೆಯ ಚಿಕ್ಕಕಬ್ಬಾರ ಗ್ರಾಮದಲ್ಲಿರುವ ಮಸೀದಿ ಕನ್ನಡ ಪ್ರೇಮಕ್ಕೆ ಮಾದರಿಯಾಗಿದೆ. ಇಲ್ಲಿ ಉರ್ದು ಅಥವಾ ಅರೇಬಿಕ್‌ನಲ್ಲಿ ಅಲ್ಲ, ಕನ್ನಡದಲ್ಲೇ ಪ್ರಾರ್ಥನೆ ನಡೆಯುತ್ತದೆ ಅನ್ನೋದು ವಿಶೇಷವೆಂಬಂತಿದೆ.
“ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎನ್ನುವ ಈ ಮಸೀದಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಮಸೀದಿಯಲ್ಲಿ ಮೊದಲು ಉರ್ದು ಭಾಷೆಯಲ್ಲಿ ಪ್ರಾರ್ಥನೆಗಳು ನಡೆಯುತ್ತಿದ್ದವು.ಆದರೆ ಗ್ರಾಮದಲ್ಲಿನ ಬಹುತೇಕ ಮುಸ್ಲಿಂರಿಗೆ ಉರ್ದು ಓದಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕಾರಣ, ಅವರು ಕನ್ನಡದಲ್ಲೇ ಪ್ರಾರ್ಥನೆ ಮಾಡಲು ಪ್ರಾರಂಭಿಸಿದರು.ಈಗ ಈ ಪರಂಪರೆ ನೂರಾರು ವರ್ಷಗಳಿಂದ ಮುಂದುವರಿಯುತ್ತಿದ್ದು, ಎಲ್ಲರೂ ಅದನ್ನು ಹೆಮ್ಮೆಯಿಂದ ಪಾಲಿಸುತ್ತಿದ್ದಾರೆ.
ಸುಮಾರು 1200 ಕುಟುಂಬಗಳಿರುವ ಚಿಕ್ಕಕಬ್ಬಾರ ಗ್ರಾಮದಲ್ಲಿ ನಾಲ್ಕುನೂರಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಇವರ ಪ್ರಾರ್ಥನೆ ಸ್ಥಳವಾದ ಜಾಮೀಯಾ ಮಸೀದಿ ಕಳೆದ ಅನೇಕ ವರ್ಷಗಳಿಂದ ಗ್ರಾಮಸ್ಥರ ಏಕತೆಯ ಸಂಕೇತವಾಗಿದೆ. ಈ ಮಸೀದಿಯ ವಿಶೇಷತೆ ಎಂದರೆ — ಇಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಗಳು, ಪ್ರಾರ್ಥನೆಗಳು ಹಾಗೂ ಉಪದೇಶಗಳು ಕನ್ನಡದಲ್ಲೇ ನಡೆಯುತ್ತವೆಯಂತೆ.
ಇಲ್ಲಿನ ಮಕ್ಕಳು ಶಾಲೆಯಿಂದಲೇ ಕನ್ನಡವನ್ನು ಕಲಿಯುತ್ತಾರೆ ಮಾತ್ರವಲ್ಲ ಅದನ್ನೇ ತಮ್ಮ ಧಾರ್ಮಿಕ ಬದುಕಿನ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನವರು ಹೇಳುವಂತೆ, “ನಮ್ಮ ಜೀವನದ ಪ್ರತಿಯೊಂದು ಭಾಗವೂ ಕನ್ನಡದೊಂದಿಗೆ ಬೆಸೆದುಕೊಂಡಿದೆ. ದೇವರ ಪ್ರಾರ್ಥನೆಯೂ ಕನ್ನಡದಲ್ಲೇ ಇರಬೇಕು ಎಂಬುದು ನಮ್ಮ ನಂಬಿಕೆ,” ಎಂದು ಹೇಳಿದ್ದಾರೆ.
ಈ ಮಸೀದಿಯ ಕನ್ನಡ ಪ್ರಾರ್ಥನೆ ಈಗ ರಾಜ್ಯದ ಇತರ ಭಾಗಗಳಲ್ಲಿಯೂ ಚರ್ಚೆಯ ವಿಷಯವಾಗಿದೆ. ಕನ್ನಡದ ಪ್ರತಿಯೊಂದು ಅಕ್ಷರಕ್ಕೂ ಗೌರವ ನೀಡುತ್ತಿರುವ ಈ ಗ್ರಾಮ, ಧರ್ಮಕ್ಕಿಂತ ಭಾಷಾ ಪ್ರೇಮವೂ ದೊಡ್ಡದು ಎಂಬ ಸಂದೇಶವನ್ನು ಸಾರುತ್ತಿದೆ.













