ನ್ಯೂಸ್ ನಾಟೌಟ್ : ಖಾಸಗಿ ಹೋಂಸ್ಟೇ ಸ್ನಾನದ ಗೃಹದಲ್ಲಿ ಯುವತಿ ಅನುಮಾಸ್ಪದ ಸಾವು ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಹೋಂ ಸ್ಟೇಗೆ ಲೈಸೆನ್ಸ್ ಇಲ್ಲ ಎಂಬುದು ಒಂದೆಡೆಯಾದರೆ, ಇಲ್ಲಿ ವಾಸ್ತವ್ಯ ಮಾಡಿದವರ ಮಾಹಿತಿ ಕೂಡ ನಿಗೂಢವಾಗಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸ್ನೇಹಿತೆ ಎಂಗೇಜ್ಮೆಂಟ್ಗಾಗಿ ಬೆಂಗಳೂರಿನಿಂದ ಬಂದಿದ್ದ ರಂಜಿತಾ ಮತ್ತು ರೇಖಾ ಹಿಪ್ಲ ಹೋಂ ಸ್ಟೇನಲ್ಲಿ ರೂಂ ಪಡೆದಿದ್ದರು. ಆ ಬಳಿಕ ಸ್ನಾನದ ಗೃಹದಲ್ಲಿ ರಂಜಿತಾ (27) ಅನುಮಾನಸ್ಪದ ಸಾವನ್ನಪ್ಪಿದ್ದರು.
ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ರಂಜಿತಾ, ರೇಖಾ ಜೊತೆಗೂಡಿ ಎರಡು ದಿನಗಳವರೆಗೂ ಹೋಂಸ್ಟೇನಲ್ಲಿ ರೂಮ್ ಪಡೆದಿದ್ದರು. ಅಂದು ಸಂಜೆ ಫಾಸ್ಟ್ಫುಡ್ ಅಂಗಡಿಯಲ್ಲಿ ಇಬ್ಬರೂ ಸಮಯ ಕಳೆದಿದ್ದು, ಬಳಿಕ ಸ್ಕೂಟಿಯಲ್ಲಿ ರಂಜಿತಾ ಮತ್ತು ರೇಖಾ ಹೋಂ ಸ್ಟೇಗೆ ಬಂದಿದ್ದರು ಎನ್ನಲಾಗಿದೆ.
ರಂಜಿತಾ ಪೋಷಕರು ನೀಡಿದ ದೂರಿನ ಅನ್ವಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿನ ಹಿಂದೆ ನೂರಾರು ಅನುಮಾನ ವ್ಯಕ್ತವಾಗಿದೆ, ಹೋಂ ಸ್ಟೇನಲ್ಲಿರುವ ಸಿಸಿ ಕ್ಯಾಮರಾಗಳೂ ಕಾರ್ಯ ನಿರ್ವಹಿಸದೇ ಭಾರಿ ಸಮಸ್ಯೆಯಾಗಿದೆ.ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ರಂಜಿತಾರ ಮರಣೋತ್ತರ ಪರೀಕ್ಷೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ರಂಜಿತಾ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದಿದ್ದರಿಂದ ಗ್ಯಾಸ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಇದ್ದು, ಗ್ಯಾಸ್ ಸೋರಿಕೆಯ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ? ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಿದೆ
ಇನ್ನು ಹೋಂ ಸ್ಟೇಗೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಪರವಾನಿಗೆ ಇರಲಿಲ್ಲ. ಹೀಗಿದ್ದರೂ ಕಳೆದ ಎರಡು ವರ್ಷಗಳಿಂದ ಮಾಲೀಕ ಇದನ್ನು ನಡೆಸಿಕೊಂಡುಬಂದಿದ್ದ ಎನ್ನಲಾಗಿದೆ. ಹೀಗಾಗಿ ಸ್ಥಳೀಯರಿಂದ ಆಕ್ರೋಶ ಕೇಳಿ ಬಂದಿದೆ.













