ನ್ಯೂಸ್ ನಾಟೌಟ್ : ತಲಕಾವೇರಿಯಲ್ಲಿ ಕಾವೇರಿ ಸಂಕ್ರಮಣ ನಡೆದು ಹೋಯ್ತು. ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಬರುವ ಈ ಕ್ಷಣವನ್ನು ನೋಡುವುದಕ್ಕೆ ಸಾವಿರಾರು ಜನ ಈ ತಲಕಾವೇರಿಗೆ ಸಾಗಿ ಬಂದರು.
ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಜನರನ್ನು ನಿಯಂತ್ರಿಸುವುದಕ್ಕಾಗಿ ಅಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಕೂಡ ನಿಯೋಜಿಸಲಾಗಿತ್ತು. ಆದರೆ ಕರ್ತವ್ಯದಲ್ಲಿದ್ದ ಪೊಲೀಸರು ತಮ್ಮ ವಾಹನದಲ್ಲಿದ್ದ ಕಸವನ್ನು ಅಲ್ಲಿ ರಸ್ತೆ ಬದಿ ಎಸೆದಿದ್ದಾರೆ. ಆದರೆ ಅಲ್ಲಿದ್ದ ಸ್ಥಳೀಯರು ಧೈರ್ಯ ತೋರಿದ್ದು, ಕಸವನ್ನು ಅಲ್ಲಿಂದ ಎತ್ತುವಂತೆ ಪೊಲೀಸರಿಗೆ ಹೇಳಿದ್ದು, ಪೊಲೀಸರಿಂದಲೇ ಕಸವನ್ನು ಎತ್ತಿಸಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ coorg_buzzನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಸ್ಥಳೀಯರ ಕೆಲಸಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತಲಕಾವೇರಿ ತೀರ್ಥೋದ್ಭವ ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿ ತಮ್ಮ ವಾಹನದಲ್ಲಿದ್ದ ಕಸವನ್ನು ಭಾಗಮಂಡಲ ಮುಖ್ಯ ದ್ವಾರದ ಬಳಿ ರಸ್ತೆ ಬದಿ ಎಸೆದಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮನವರಿಕೆ ಮಾಡಿ ಅದನ್ನು ಅಲ್ಲಿಂದ ತೆಗೆಸಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.
ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜನ ಪ್ರಶ್ನೆ ಮಾಡಲು ಆರಂಭಿಸಿದಾಗ ದೇಶ ಉದ್ಧಾರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಕೊಡಗಿನ ಜನರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಪ್ರತಿ ಜಿಲ್ಲೆಯಲ್ಲಿ ಜನ ಹೀಗೆ ವರ್ತಿಸಬೇಕು ಹಾಗಾದಾಗ ಮಾತ್ರ ನಮ್ಮ ದೇಶ ಸ್ವಚ್ಛ ಸುಂದರ ಆಗುವುದಕ್ಕೆ ಸಾಧ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.













