ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ವು ವಿದ್ಯಾರ್ಥಿ ಪ್ರವೇಶವನ್ನು 100ರಿಂದ 150ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡೀನ್ ಡಾ. ನೀಲಾಂಬಿಕೈ ನಟರಾಜನ್, “ಈ ಸಾಧನೆಗೆ ಆಡಳಿತ ಮಂಡಳಿಯ ದೃಢವಾದ ಬೆಂಬಲ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಇದರ ಅಧ್ಯಕ್ಷರು ಡಾ. ಕೆ.ವಿ. ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಮತ್ತು ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ., ಖಜಾಂಚಿ ಡಾ. ಗೌತಮ್ , ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ ಲೀಲಾಧರ್ ಡಿ. ವಿ. ಅವರ ಸಹಕಾರದಿಂದಲೇ ಕಾಲೇಜು ಈ ಹಂತ ತಲುಪಲು ಸಾಧ್ಯವಾಯಿತು. ಅಲ್ಲದೇ ವೈದ್ಯಕೀಯ ಅಧೀಕ್ಷಕ ಡಾ. ಸಿ. ರಾಮಚಂದ್ರ ಭಟ್, ರಿಜಿಸ್ಟ್ರಾರ್ ಡಾ. ಸಂದೇಶ್ ಕೆ.ಎಸ್., NMC ನೋಡಲ್ ಅಧಿಕಾರಿ ಡಾ. ಗೀತಾ ಜೆ. ಡೋಪ್ಪಾ, ವಿಭಾಗಾಧ್ಯಕ್ಷರು ಹಾಗೂ ಎಲ್ಲಾ ಸಿಬ್ಬಂದಿಯ ಪರಿಶ್ರಮ ಮತ್ತು ತಂಡದ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು. ಜತೆಗೆ ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸಿ, ಕಾಲೇಜಿನ ಆಡಳಿತ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಸಿ. ರಾಮಚಂದ್ರ ಭಟ್ ಅವರು ಮಾತನಾಡಿ, “ಆಸ್ಪತ್ರೆಯ ಮೂಲಸೌಕರ್ಯ ಮತ್ತು ಗುಣಮಟ್ಟದ ರೋಗಿ ಸೇವೆಯನ್ನು ವಿಸ್ತರಿಸಲು ನಡೆದ ನಿರಂತರ ಪ್ರಯತ್ನಗಳು ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಹೆಚ್ಚುವರಿ ವಿದ್ಯಾರ್ಥಿ ಪ್ರವೇಶದಿಂದ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳು ಇನ್ನಷ್ಟು ಬಲಪಡಿಸಲಿವೆ ಎಂದರು. ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.













