ನ್ಯೂಸ್ ನಾಟೌಟ್: ಕಾಮಗಾರಿಯ ವೇಳೆ ಸಾರ್ವಜನಿಕ ನೀರಿನ ಪೈಪ್ ಗಳನ್ನು ಒಡೆದು ಹಾಕಿ ಸುಳ್ಯದ ನಗರದ ಎಲ್ಲೆಂದರಲ್ಲಿ ನೀರು ಅನಗತ್ಯವಾಗಿ ಹರಿದು ಹಾಳಾಗುತ್ತಿತ್ತು. ನೀರು ಜೀವ ಜಲ, ಒಂದೊಂದು ಹನಿಯು ಮನುಷ್ಯನ ಜೀವ-ಜೀವನಕ್ಕೆ ಅಗತ್ಯ, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯೂಸ್ ನಾಟೌಟ್ ವಿಡಿಯೋ ಮೂಲಕ ಒತ್ತಾಯಿಸಿತ್ತು.
ಇದಕ್ಕೆ ಸ್ಪಂದಿಸಿರುವ ಸುಳ್ಯದ ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡ ಅವರು ನೀರಿನ ಪೈಪ್ ಗಳು ಒಡೆದು ಜಾಗಕ್ಕೆ ಭೇಟಿ ನೀಡಿದ್ದಾರೆ. ಅನಗತ್ಯ ನೀರನ್ನು ಪೋಲು ಮಾಡುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅವುಗಳನ್ನು ತಕ್ಷಣ ಸರಿಪಡಿಸಬೇಕೆಂದು ಸೂಚಿಸಿದ್ದಾರೆ. ಹೊಸ ಪೈಪ್ ಲೈನ್ ಗಾಗಿ ಗುಂಡಿ ಅಗೆಯಲಾಗಿತ್ತು. ರೋಟರಿ ಸ್ಕೂಲ್ ಗೆ ಹೋಗುತ್ತಿದ್ದ ನೀರು ಸ್ಥಗಿತಗೊಂಡು ವಿದ್ಯಾರ್ಥಿಗಳು, ಟೀಚರ್ಸ್ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಮಾತ್ರವಲ್ಲ ಅಕ್ಕಪಕ್ಕದ ಮನೆಗಳಿಗೂ ನೀರು ಸ್ಥಗಿತಗೊಂಡಿತ್ತು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಹಿರಿಯ ವಕೀಲರು ಕೂಡ ಆಗಿರುವ ವೆಂಕಪ್ಪ ಗೌಡರು ಸ್ಥಳಕ್ಕೆ ತೆರಳಿದರು. ಇಂಜಿನೀಯರ್ ಕರೆಸಿ ತರಾಟೆಗೆ ತೆಗೆದುಕೊಂಡರು. ಹೊಸ ಪೈಪ್ ಅಳವಡಿಸುತ್ತಿರುವುದು ಒಳ್ಳೆಯ ಕೆಲಸ, ಆದರೆ ಹಳೆ ಪೈಪ್ ಗಳನ್ನು ಒಡೆದು ಹಾಕಿ ನೀರು ಪೋಲು ಮಾಡುವುದರಲ್ಲಿ ಅರ್ಥವಿಲ್ಲ. ಕೂಡಲೇ ಸರಿಪಡಿಸಬೇಕು ಎಂದು ಕೆಯುಡಬ್ಯುಎಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.













