ನ್ಯೂಸ್ ನಾಟೌಟ್ : ದೈವ ನಿಂದನೆ ಮಾಡುವವರ ವಿರುದ್ಧ ದನಿಯೆತ್ತುವ ದೈವಾರಾಧಕರಿಗೆ ಪಿಲ್ಚಂಡಿ ದೈವ (Pilichandi Daiva) ಅಭಯ ನೀಡಿದೆ. ದೈವದ ವೇಷ ತೊಟ್ಟು ದೊಂಬರಾಟ ಮಾಡುವವರಿಗೆ , ನಿಂದಿಸುತ್ತಿರುವವರಿಗೆ ಹುಚ್ಚು ಹಿಡಿಸುತ್ತೇನೆಂದು ದೈವ ಅಭಯದ ನುಡಿ ನೀಡಿದೆ.
ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶನವಾದ ಹಿನ್ನೆಲೆ ಅನೇಕರು ಅನುಕರಣೆ ಮಾಡುತ್ತಿದ್ದಾರೆ. ದೈವಾರಾಧನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೈವಗಳ ಅಪಹಾಸ್ಯವಾಗುತ್ತಿದೆ ಎಂದು ದೈವದ ಮುಂದೆ ಭಕ್ತೆಯೊಬ್ಬರು ನೋವು ತೋಡಿಕೊಂಡಿದ್ದರು.

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೈವದ ಅನುಕರಣೆ ಮಾಡುತ್ತಿರುವವರ ವಿಡಿಯೋ ಹರಿದಾಡುತ್ತಿವೆ. ‘ಕಾಂತಾರ’ ಸಿನಿಮಾ ಮತ್ತು ದೈವದ ಅಪಹಾಸ್ಯ ಮಾಡುತ್ತಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಸಾಮೂಹಿಕ ಪ್ರಾರ್ಥನೆ ವೇಳೆ ದೈವಾರಾಧಕರಿಗೆ ಪಿಲಿಚಂಡಿ ದೈವದ ನುಡಿ ನುಡಿದೆ. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ ಎಂದು ದೈವದ ಆಕ್ರೋಶದ ನುಡಿ ನುಡಿದಿದೆ.ಷ
ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಭಕ್ತೆ, ದೈವಗಳ ಅಪಹಾಸ್ಯ ತಡೆಯಲು ಹೋದ ನಮಗೆ ಅಪಹಾಸ್ಯ ಮಾಡುತ್ತಿದ್ದಾರೆ. ನಮಗಾದ ನೋವನ್ನ ಮಂಗಳೂರು ಹೊರವಲಯದ ಬಜಪೆ ಸಮೀಪದ ಪೆರಾರ ಕ್ಷೇತ್ರದ ದೈವಗಳ ಮುಂದೆ ತೋಡಿಕೊಂಡಿದ್ದೇವೆ. ನಾವು ಬೇಡಿಕೊಂಡಾಗ ದೈವ ನಮಗೆ ಅಭಯದ ನುಡಿ ನೀಡಿದೆ ಎಂದು ತಿಳಿಸಿದರು.
‘ಏನು ಬೇಕಾದರೂ ಆಗಲಿ, ನೀವು ಮುಂದುವರೆಯಿರಿ. ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ’ ಎಂದು ದೈವ ನುಡಿ ನೀಡಿದೆ. ‘ಯಾರು ದೈವಗಳ ವೇಷ ತೊಟ್ಟು ದೊಂಬರಾಟ ಮಾಡುತ್ತಾರೋ ಅವರಿಗೆ ಹುಚ್ಚು ಹಿಡಿಸುತ್ತೇನೆ. ಇಲ್ಲವಾದಲ್ಲಿ ಒಳ್ಳೆ ಬುದ್ಧಿ ನೀಡಿ ಸರಿ ದಾರಿಯಲ್ಲಿ ನಡೆಸುತ್ತೇನೆ’ ಎಂದು ದೈವ ಹೇಳಿರುವುದಾಗಿ ತಿಳಿಸಿದರು.
ಈಗೀಗ ಮಹಿಳೆಯರು ದೈವ ಬಂದಂತೆ ವರ್ತಿಸುತ್ತಾರೆ. ತುಳುನಾಡಿನ ಇತಿಹಾಸದಲ್ಲಿ ಈ ರೀತಿ ಕಂಡ ಕಂಡಲ್ಲಿ ದೈವ ಬರುವಂತಹ ಪದ್ಧತಿ ಇಲ್ಲ. ಪವಿತ್ರ ಕ್ಷೇತ್ರಗಳಲ್ಲಿ ಹಾಗೂ ದೈವ ಅವಾಹನೆಗೆ ಅದರದ್ದೇ ನಿಯಮಗಳು ಇದೆ ಎಂದು ಅವರು ಹೇಳಿದರು.













