ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಭಾಗದಲ್ಲಿ ಹೆಮ್ಮೆಯ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆ ಪಡೆದಿರುವ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 48ನೇ ವಾರ್ಷಿಕ ಮಹಾಸಭೆ ಶ್ರೀಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದಿದೆ.
ಸಂಘದ ಅಧ್ಯಕ್ಷ ಯನ್.ಸಿ ಅನಂತ್ ಊರುಬೈಲು ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಪ್ರಸ್ತುತ ಸಂಘವು ಒಟ್ಟು 2811 ಸದಸ್ಯರನ್ನು ಹೊಂದಿದೆ. ರೂ.279.14 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘದಲ್ಲಿ ಒಟ್ಟು ರೂ.3483.42 ಲಕ್ಷ ಗಳಷ್ಟು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ. 2024-25ರ ಅವಧಿಯಲ್ಲಿ ರೂ. 3858626ಗಳಷ್ಟು ನಿವ್ವಳ ಲಾಭಗಳಿಸಿಕೊಂಡಿದೆ. ಸದಸ್ಯರಿಗೆ ಶೇ.9ರಷ್ಟು ಡಿವಿಡೆಂಟ್ ಘೋಷಿಸಲಾಯಿತು. ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅನಂತ್ ಅವರು, ‘ನಾವು ಸ್ಪರ್ಧೆಗೆ ಬಿದ್ದಂತೆ ಕೇವಲ ಲಾಭಗಳಿಸಿಕೊಳ್ಳುವುದನ್ನೇ ಗುರಿಯಾಗಿಸಿಕೊಂಡಿಲ್ಲ. ಸದಸ್ಯರಿಗೆ ದರದಲ್ಲಿ ಗರಿಷ್ಠ ಸೇವೆ ಮತ್ತು ಸಹಕಾರ ನೀಡುವ ಉದ್ದೇಶದಿಂದ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು. ಮುಂದಿನ ವರ್ಷ ಸಂಘ 50 ವರ್ಷವನ್ನು ಪೂರೈಸುತ್ತಿದೆ. ಇದೇ ವೇಳೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ 24 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸಂಘದ ನಿರ್ದೇಶಕಿಯರಾದ ವಾಣಿ, ಪ್ರಿಯಾಂಕ ಪ್ರಾರ್ಥನೆ ಮಾಡಿದರು. ಸಿಇಓ ಆನಂದ ಬಿ.ಕೆ ವರದಿ ವಾಚನ ಮಾಡಿದರು. ಉಪಾಧ್ಯಕ್ಷ ಯಶವಂತ ಡಿಡಿ ವಂದಿಸಿದರು.













