ನ್ಯೂಸ್ ನಾಟೌಟ್: ಮಲೆನಾಡಿನ ಜನರ ಸಂವಿಧಾನ ಬದ್ಧ ಹಕ್ಕುಗಳಾದ 371ನೇ ವಿಧಿ ಅನ್ವಯ ಸ್ವಾಯತ್ತತೆಯ ಅಡಿಯಲ್ಲಿ ಸಂರಕ್ಷಣೆ ಹಾಗೂ 2006ರ ಅರಣ್ಯ ಹಕ್ಕು ಕಾಯ್ದೆಗಳನ್ನು ಅಳವಡಿಸಲು ಸಂವಿಧಾನ ಬದ್ಧ ಹಕ್ಕುಗಳು ಶೆಡ್ಯೂಲ್ 6ರ ಪ್ರಕಾರ ಗುಡ್ಡಗಾಡು ಕಾನೂನು ಜಾರಿ ಮಾಡುವ ಬಗ್ಗೆ ವಿಶೇಷ ಗ್ರಾಮ ಸಭೆ ಕರೆಯುವಂತೆ ಮಲೆನಾಡು ಜಂಟಿ ಕ್ರಿಯಾ ಸಮಿತಿ (ರಿ) ಮತ್ತು ರೈತ ಹಿತರಕ್ಷಣಾ ವೇದಿಕೆ (ರಿ) ಕೊಲ್ಲಮೊಗ್ರು-ಕಲ್ಮಕಾರು, ರೈತ ಸಂಘ ಸುಳ್ಯ ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯ, ವಕೀಲ ಪ್ರದೀಪ್ ಕುಮಾರ್ ಕೆ.ಎಲ್. ಪಶ್ಚಿಮ ಘಟ್ಟದ ಸಂರಕ್ಷಣೆಯಲ್ಲಿ ಜನರು ಮತ್ತು ಜೀವವೈವಿಧ್ಯ ವಿಧಿ ಜಾರಿ ಮಾಡಲು ಹಾಗೂ ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಶೇಷ ಗ್ರಾಮ ಸಭೆ ಕರೆಯಲು ಆಗ್ರಹಿಸಿದ್ದಾರೆ.
ಈ ವಿಶೇಷ ಗ್ರಾಮ ಸಭೆಗೆ ಪ್ರತಿಯೊಬ್ಬ ಗ್ರಾಮ ಪಂಚಾಯತ್ ಸದಸ್ಯ ಮುತುವರ್ಜಿ ವಹಿಸಬೇಕು. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ಪ್ರತಿಯೊಬ್ಬ ಮಲೆನಾಡಿನ ಭಾದಿತ ತಾಲೂಕಿನ ವಿಧಾನಸಭಾ ಶಾಸಕರು ಮತ್ತು ಜಿಲ್ಲೆಯ ಸಂಸತ್ತು ಸದಸ್ಯರು 2006ರ ಅರಣ್ಯ ಹಕ್ಕು ಕಾಯ್ದೆ, 1964ರ ಕಂದಾಯ ಕಾನೂನುಗಳನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಕಾನೂನು ಬದ್ಧ ಹಕ್ಕು ರಕ್ಷಣೆ ಮಾಡಲು ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 48 ಗ್ರಾಮ ಪಂಚಾಯಿತಿಗಳಿಗೆ ರಿಜಿಸ್ಟರ್ ಕೋರಿಕೆ ಕಳುಹಿಸಲಾಗಿದೆ. ಎಲ್ಲ ಬಾದಿತ ಸದಸ್ಯರು ವಿಶೇಷ ಗ್ರಾಮ ಸಭೆ ಕರೆದು ಆಯಾಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಡೀ ಗ್ರಾಮಕ್ಕೆ ಹೋಗಿ ಜನರ ಉಳಿವಿಗೋಸ್ಕರ, ಸಮಗ್ರ ಅರಣ್ಯ ಸಂರಕ್ಷಣೆಗೋಸ್ಕರ
ಕಾನೂನು ನಡಾವಳಿಯನ್ನು ಜನರಿಗೆ ತಿಳಿಸಿ ಕೊಡಬೇಕಾಗಿದೆ ಎಂದಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿಗಳು, ಜನಸಾಮಾನ್ಯರು ನಿಮ್ಮ ಪಂಚಾಯಿತಿಗೆ ಹಾಗೂ ಸಂಘಟನೆಗಳನ್ನು ಕರೆದು ಮೂರನೇ ಒಂದು ಭಾಗದಷ್ಟು ವಿಶೇಷ ಗ್ರಾಮ ಸಭೆಗೆ ಅರ್ಜಿ ಸಲ್ಲಿಸುವಂತೆ ವಕೀಲ ಪ್ರದೀಪ್ ಕುಮಾರ್ ಕೆ.ಎಲ್. ಒತ್ತಾಯಿಸಿದ್ದಾರೆ. ಪ್ರವೀಣ್ ಮುಂಡೋಡಿ ಮತ್ತು ಅಶೋಲ್ ಎಡಮಲೆ ಸುದ್ದಿಗೋಷ್ಠಿಯಲ್ಲಿದ್ದರು.