ನ್ಯೂಸ್ ನಾಟೌಟ್: ಸೋಮವಾರ ರಾತ್ರಿ ಉಡುಪಿಯ ಹೆಬ್ರಿಯಲ್ಲಿ ಪೊಲೀಸರ ಎನ್ ಕೌಂಟರ್ ನಿಂದ ಹತ್ಯೆಯಾದ 46 ವರ್ಷದ ವಿಕ್ರಮ್ ಗೌಡ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸುಧಾರಿಕ ನಕ್ಸಲೀಯರು, ಎನ್ ಕೌಂಟರ್ ನಿಜವೋ ನಕಲಿಯೋ ಎಂದು ತಿಳಿಯಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಸುದ್ದಿಗೋಷ್ಠಿ ಕರೆದು ಇಂದು(ನ.21) ಒತ್ತಾಯಿಸಿದ್ದಾರೆ.
ಮಾಜಿ ನಕ್ಸಲೀಯರಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಮಾತನಾಡಿ ಎಲ್ಲ ಎನ್ ಕೌಂಟರ್ ಪ್ರಕರಣಗಳಂತೆ ಈ ಪ್ರಕರಣದ ಬಗ್ಗೆಯೂ ಎಫ್.ಐ.ಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ವಿಕ್ರಂಗೌಡ ದೊಡ್ಡ ನಕ್ಸಲ್ ನಾಯಕ ಎಂಬ ಹೇಳಿಕೆಯನ್ನು ನಿರಾಕರಿಸಿದ ಅವರು, ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಸುಳ್ಳು, ನಕ್ಸಲೀಯರ ವಿರುದ್ಧ ನಕಲಿ ಕೇಸ್ ದಾಖಲಿಸುವುದು ಸಾಮಾನ್ಯವಾಗಿದೆ ಎಂದಿದ್ದಾರೆ.
ವಿಕ್ರಮ್ ಅಥವಾ ಅವರ ತಂಡದ ಸದಸ್ಯರು ಎಂದಿಗೂ ಪೊಲೀಸರ ಮೇಲೆ ದಾಳಿ ಮಾಡಿಲ್ಲ ಅಥವಾ ಯಾರನ್ನೂ ಕೊಂದಿಲ್ಲ ಅಥವಾ ಯಾರಿಗೂ ಬೆದರಿಕೆ ಹಾಕಿಲ್ಲ. ಅಂತಹ ಹತ್ಯೆಯ ಅಗತ್ಯತೆ ಅಥವಾ ತುರ್ತು ಏನಿತ್ತು? ಬಂದೂಕುಗಳಿವೆ ಎಂಬ ಕಾರಣಕ್ಕೆ ಯಾರನ್ನಾದರೂ ಕೊಲ್ಲಲು ಯಾರು ಪರವಾನಗಿ ನೀಡಿದರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯೇ ಉತ್ತರಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ನಕ್ಸಲೀಯರು ಒತ್ತಾಯಿಸಿದ್ದಾರೆ.
Click