ನ್ಯೂಸ್ ನಾಟೌಟ್: ಸಮಾಜದಲ್ಲಿನ ಅಶಕ್ತರಿಗೆ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುತ್ತಾ ಸಮುದಾಯದ ಅಭಿವೃದ್ಧಿ ಶ್ರಮಿಸುತ್ತಿರುವ ದೀನ ದಯಾಳ್ ಎಜ್ಯುಕೇಶನಲ್ ರೂರಲ್ & ಅರ್ಬನ್ ಡೆವಲಪ್ಮೆಂಟ್ ಟ್ರಸ್ಟ್ (ರಿ.) ವತಿಯಿಂದ ಇದೀಗ ಇತರ ಎಲ್ಲಾ ವರ್ಗದ ಜನರ ಆರ್ಥಿಕ ಅಭಿವೃದ್ಧಿಯನ್ನು ಕಣ್ಣ ಮುಂದೆ ಇಟ್ಟುಕೊಂಡು ದೀನದಯಾಳ್ ಸಹಕಾರ ಸಂಘ’ ಪ್ರಾರಂಭಿಸಲು ಉದ್ದೇಶಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಡಿ.7ರಂದು ಸುಳ್ಯದ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್ನ 2ನೇ ಮಹಡಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಪ್ರವರ್ತಕ, ಮಾಜಿ ಸಚಿವ ಎಸ್. ಅಂಗಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೀನ ದಯಾಳ್ ಎಜ್ಯುಕೇಶನಲ್ ರೂರಲ್ & ಅರ್ಬನ್ ಡೆವಲಪ್ಮೆಂಟ್ ಟ್ರಸ್ಟ್ (ರಿ.) ಜನಾಂಗದ ಕುಲದೈವಗಳ ಗುಡಿ ನಿರ್ಮಾಣ, ಇತರ ಪರಿಶಿಷ್ಟ ಜಾತಿಗಳ ದೈವಸ್ಥಾನಕ್ಕೆ ಆರ್ಥಿಕ ಸಹಕಾರ ಅಲ್ಲದೆ ಇತರ ಸಮಾಜದ ಕಾರ್ಯಕ್ರಮಗಳಿಗೂ ಆರ್ಥಿಕ ಸಹಕಾರ ನೀಡುತ್ತಾ ಬಂದಿದೆ. ಇದೀಗ ನೆಲ್ಲೂರು ಕೆಮ್ರಾಜಿ ಗ್ರಾಮದ ದಾಸನಕಜೆಯಲ್ಲಿ ಸುಸಜ್ಜಿತ ಸಭಾಭವನ, ಕುಲದ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಕಲಾಕೇಂದ್ರವನ್ನು ಸುಮಾರು 140 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸುವುದರೊಂದಿಗೆ, ಕಡು ಬಡತನದಲ್ಲಿರುವ ಜನಾಂಗದ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದೆ ಎಂದು ಅಂಗಾರ ತಿಳಿಸಿದರು.
ನೂತನ ದೀನದಯಾಳ್ ಸಹಕಾರ ಸಂಘದ ನೂತನ ಕಚೇರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ। ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಬಳಿಕ ಬೂಡು ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರ ಸಭಾಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ, ಸಂಘದ ಮುಖ್ಯಪ್ರವರ್ತಕ ಎಸ್. ಅಂಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ , ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಟಿ.ಎ.ಪಿ.ಸಿ.ಯಂ.ಯಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸಹಕಾರ ಸಂಘಗಳ ಉಪ ನಿರ್ದೇಶಕ ರಮೇಶ್ ಎನ್.ಎಚ್., ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ಟಿ.ಎ.ಪಿ.ಸಿ.ಯಂ.ಯಸ್ ಕಾರ್ಯದರ್ಶಿ ಜಯರಾಮ್ ದೇರಪ್ಪಜ್ಜನ ಮನೆ, ಭಾ.ಜ.ಪ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಲೆಕ್ಕ ಪರಿಶೋಧಕ ಶ್ರೀಪತಿ ಭಟ್, ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ಮೊಗೇರ ಅಧ್ಯಯನ ಟ್ರಸ್ಟ್ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಗೌರವ ಉಪಸ್ಥಿತರಿರಲಿದ್ದಾರೆ ಸುದ್ದಿಗೋಷ್ಠಿಯಲ್ಲಿ ಜಿ. ಜಗನ್ನಾಥ, ಹರಿಶ್ಚಂದ್ರ ಹಾಸನಡ್ಕ ಉಪಸ್ಥಿತರಿದ್ದರು.