ನ್ಯೂಸ್ ನಾಟೌಟ್: ನೀರಿಗಾಗಿ ಬೋರ್ ವೆಲ್ ಕೊರೆಸಲು ರಾಜ್ಯ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದೆ. ಇದೀಗ ಬೋರ್ ವೆಲ್ ವಿಚಾರವಾಗಿ ಸರ್ಕಾರವು ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಹೇರಲು ಮುಂದಾಗಿದೆ.
ಬೋರ್ವೆಲ್ ಕೊರೆಸಿ, ಅದನ್ನು ಸಕಾಲದಲ್ಲಿ ಮುಚ್ಚದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ. ಅದರಂತೆ ಖಾಲಿ ಬೋರ್ ವೆಲ್ ಗಳನ್ನು ಮುಚ್ಚದವರಿಗೆ ಬರೋಬ್ಬರಿ ಒಂದು ವರ್ಷ ಜೈಲು ಶಿಕ್ಷೆಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನು ಜಾರಿ ಮಾಡಲು ಸಜ್ಜಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪ್ರಸ್ತಾಪಿಸಿರುವ ಕರ್ನಾಟಕ ಅಂತರ್ಜಲ ತಿದ್ದುಪಡಿ ಮಸೂದೆ-2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯದ ಹಲವೆಡೆ ಕೊರೆಸಲಾಗಿರುವ ಬೋರ್ ವೆಲ್ ಗಳನ್ನು ಮುಚ್ಚಿಲ್ಲ. ಅಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಅಪಾಯದ ಸ್ಥಿತಿಯಲ್ಲಿವೆ. ಇವುಗಳನ್ನು ತ್ವರಿತವಾಗಿ ಮುಚ್ಚಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ನಿಷ್ಕ್ರಿಯ ಬೋರ್ ವೆಲ್ ಗಳಿಂದ ಎದುರಾಗಿರುವ ಅನಾಹುತಗಳು ಒಂದೆರಡಲ್ಲ. ಹಲವು ಜಿಲ್ಲೆಗಳಲ್ಲಿ ಬೋರ್ ವೆಲ್ ಗಳಿಂದ ಅಪಾಯ ಸಂಭವಿಸಿದೆ. ಮಕ್ಕಳು ಬೋರ್ ವೆಲ್ಗೆ ಬಿದ್ದಿರುವ ಘಟನೆಗಳು ವರದಿಯಾಗಿವೆ. ಅಂದಿನಿಂದಲೂ ಕೊಳವೆ ಬಾವಿ ಮಾಲೀಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಹೇಳಲಾಗುತ್ತಿದೆ. ಬೋರ್ವೆಲ್ ಹಾಕಿಸಿದ ನಂತರ ಅದು ಫೇಲ್ ಆದರೆ, ಮಾಲೀಕರೇ ಅದನ್ನು ಮುಚ್ಚಿ ಭದ್ರಪಡಿಸಬೇಕು ಎಂದು ಹೇಳಿದ್ದಾರೆ.
ಅನುಮತಿಯಿಲ್ಲದೆ ಬೋರ್ ವೆಲ್ ಕೊರೆದರೆ, ಭಾರಿ ದಂಡದೊಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವೂ ಸೇರಿದಂತೆ ಒಂಬತ್ತು ವಿವಿಧ ವಿಧೇಯಕಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ 1965ಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿ ಕಾರ್ಮಿಕರಿಂದ 20 ರೂಪಾಯಿ ಹಾಗೂ ಮಾಲೀಕರಿಂದ 40 ರೂಪಾಯಿ ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿತ್ತು. ಅದನ್ನು ಈಗ ಹೆಚ್ಚಿಸಲಾಗಿದ್ದು, ಕಾರ್ಮಿಕರಿಂದ 50 ರೂಪಾಯಿ, ಮಾಲೀಕರಿಂದ 100 ರೂಪಾಯಿ ಹಾಗೂ ಸರ್ಕಾರದಿಂದ 50 ರೂಪಾಯಿ ವಂತಿಕೆ ಹೆಚ್ಚಿಸಲು ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Click