ನ್ಯೂಸ್ ನಾಟೌಟ್: ‘ಯಾರು ಜಿಹಾದಿಗಳಿದ್ದೀರಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ ವಾರ ನೀವು ಈದ್ ಮಿಲಾದ್ ಮೆರವಣಿಗೆ ಮಾಡಲಿಕ್ಕಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಿಂದೂ ಸಮಾಜ ಮನಸ್ಸು ಮಾಡಿದರೆ ನಿಮ್ಮ ಈದ್ ಮಿಲಾದ್ ಮೆರವಣಿಗೆ ಹೋಗಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ನ (ವಿಎಚ್ ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಗಲಭೆಯನ್ನು ಖಂಡಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ, ವಿಎಚ್ ಪಿ – ಬಜರಂಗದಳದ ಆಶ್ರಯದಲ್ಲಿ ಮಲ್ಲಿಕಟ್ಟೆ–ಕದ್ರಿ ವೃತ್ತದ ಬಳಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಕಳೆದ ಸಲ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಮುಂದಿನ ವಾರವೂ ಅಂತಹ ಘಟನೆ ಮರುಕಳಿಸಬಹುದು. ಹಾಗಾಗಿ ಈದ್ ಮಿಲಾದ್ ಮೆರವಣಿಗೆಗೆ ನಿರ್ಬಂಧ ಹೇರಬೇಕು. ಮೆರವಣಿಗೆಗೆ ಅನುಮತಿ ನೀಡಿ, ಮುಂದೇನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ. ಇದು ಸರ್ಕಾರಕ್ಕೆ ನಮ್ಮ ಎಚ್ಚರಿಕೆ’ ಎಂದರು.
‘ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆಯಲ್ಲ. ಈ ಭಯೋತ್ಪಾದಕ ಕೃತ್ಯ ಪೂರ್ವನಿಯೋಜಿತ ಪಿತೂರಿ. ಇದರ ಹಿಂದೆ ನಿಷೇಧಿತ ಪಿಎಫ್ ಐ ಸಂಘಟನೆ ಕೈವಾಡವಿರುವ ಸಂಶಯವಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಗಲಭೆ ವೇಳೆ ನೂರಾರು ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕು. ಈ ಘಟನೆ ಸಂಬಂಧ ಮುಗ್ಧ ಹಿಂದೂ ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಅದನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
‘ನಾಗಮಂಗಲ ಘಟನೆಯಿಂದ ಹಿಂದೂ ಸಮಾಜ ಭಯಭೀತವಾಗಿದೆ. ಕಾರ್ಯಕ್ರಮ ಮಾಡಬೇಕಾದರೆ ಆಲೋಚಿಸುವ ಸ್ಥಿತಿ ಇದೆ. ನಮಗೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಮಿಲಿಟರಿ ಭದ್ರತೆ ಒದಗಿಸುವಂತೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸುತ್ತೇವೆ’ ಎಂದರು.