ನ್ಯೂಸ್ ನಾಟೌಟ್: ಕೆಲವು ತಿಂಗಳ ಹಿಂದೆ ಸರ್ಕಾರಿ ಸೆಟ್ಲ್ ಬಸ್ ಗೆ ಗುತ್ತಿಗೆ ಆಧಾರದಲ್ಲಿ ಡ್ರೈವರ್ ಗಳ ನೇಮಕಾತಿಯಾಗಿತ್ತು. ಇದೀಗ ಡಿಪೋಗೆ ಸೇರಿದ ಅಧಿಕಾರಿಯೊಬ್ಬರು ಪುತ್ತೂರು ಡಿವಿಷನ್ ಗೆ ಸೇರಿದ ಸೆಟ್ಲ್ ಬಸ್ ನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿದ್ದ ಬಡ ಚಾಲಕನ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತ ವಿಡಿಯೋಗಳು ಇದೀಗ ವೈರಲ್ ಆಗುತ್ತಿದೆ. ಘಟನೆ ಸವಣೂರಿನಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಅಧಿಕಾರಿ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬರು ಬಸ್ ಚಾಲಕನನ್ನು ಬ್ಯಾಗ್ ಹಿಡಿದು ದೂಡುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಡ್ರೈವರ್ ಮೇಲೆ ಹಲ್ಲೆ ನಡೆದಿದೆ. ಈ ವೇಳೆ ವಿಡಿಯೋ ಮಾಡಲಾಗಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಈ ವಿಚಾರವನ್ನು ಮಾತುಕತೆಯ ಮೂಲಕ ಆಸ್ಪತ್ರೆಯಲ್ಲಿ ಬಗೆಹರಿಸುವ ಯತ್ನವೂ ನಡೆದಿದೆ.
ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಡ್ರೈವರ್ ಗೆ ಅಧಿಕಾರಿ ಸಿವಿಲ್ ಡ್ರೆಸ್ ನಲ್ಲಿ ಬಂದಿದ್ದರಿಂದ ಗೊತ್ತಾಗಲಿಲ್ಲವಂತೆ. ಹೀಗಾಗಿ ಬಸ್ ಚಾಲಕ ಬಸ್ ನಿಲ್ಲಿಸಲಿಲ್ಲ. ಬಸ್ ರಶ್ ಇದ್ದುದರಿಂದ ಅವರು ಬಸ್ ನಿಲ್ಲಿಸಲಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸಿಟ್ಟಾದ ಅಧಿಕಾರಿ ನನಗೇ ನೀನು ಬಸ್ ನಿಲ್ಲಿಸುತ್ತಿಲ್ಲ ಎಂದು ಸಿಟ್ಟಿಗೆದ್ದು ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಬಸ್ ಡ್ರೈವರ್ ಆರೋಪಿಸಿದ್ದಾರೆ. ಸದ್ಯ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಚಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.