ವಿಶೇಷ ವರದಿ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಗ್ರಾಮೀಣ ಭಾಗದ ಎಲೆ ಮರೆಯ ಕಾಯಿಗಳನ್ನು ಪ್ರತಿಭಾನ್ವೇಷಣೆ ಮೂಲಕ ಕರೆತಂದು ಹಳ್ಳಿಯಲ್ಲಿ ಗುಣಮಟ್ಟದ ತರಬೇತಿ ನೀಡಿ ಭಾರತದ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ಕೂಟದಲ್ಲಿ ಪ್ರತಿನಿಧಿಸುವಂತೆ ಮಾಡಿರುವ ಹೆಗ್ಗಳಿಕೆ ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿಗೆ ಸಲ್ಲುತ್ತದೆ.
ಹೌದು, ಸುಳ್ಯ ಸುತ್ತಮುತ್ತ ಗ್ರಾಮೀಣ ಪ್ರದೇಶ. ಇಲ್ಲಿನ ಜನ ಹೆಚ್ಚಿನವರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು. ಮ್ಯಾರಥಾನ್, ಕಬಡ್ಡಿ ಕ್ರೀಡೆಗಳಲ್ಲಿ ನಮ್ಮ ಊರಿನ ಅನೇಕ ಸಾಧಕರು ಮಿಂಚಿದ್ದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಂತಹ ಸಾಧಕರ ಊರಿನಲ್ಲಿ ತಮ್ಮ ತಾತ ಹೆಮ್ಮೆಯ ಕುರುಂಜಿ ವೆಂಕಟರಮಣ ಗೌಡರ ಹೆಸರಿನಲ್ಲಿ ‘ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿ’ ಸ್ಥಾಪಿಸಬೇಕೆನ್ನುವ ಮಹತ್ವಾಕಾಂಕ್ಷೆ ಕನಸನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಹೊಂದಿದ್ದರು. ಅದರಂತೆ ಸಮಾನ ಮನಸ್ಕರ ಜೊತೆ ಚರ್ಚಿಸಿ ಕೊನೆಗೂ ಅಕಾಡೆಮಿಗೆ ಚಾಲನೆ ನೀಡಿದರು.
ಊರ ಹಾಗೂ ಪರವೂರಿನ ಸಾಧಕ ಕ್ರೀಡಾ ಪ್ರತಿಭೆಗಳಿಗೆ ಊಟ, ಶಿಕ್ಷಣ, ತರಬೇತಿ, ವಸತಿಯನ್ನು ಸಂಪೂರ್ಣ ಉಚಿತವಾಗಿ ನೀಡುವ ಸಂಕಲ್ಪವನ್ನ ಅಕ್ಷಯ್ ಕೆ.ಸಿ ಮಾಡಿದರು. ಉತ್ತಮ ಯೋಜನೆಗೆ ಫಲ ಸಿಗುತ್ತದೆ ಅನ್ನುವ ಮಾತಿದೆ. ಆ ಮಾತು ನಿಜವಾಯಿತು. ಈ ಅಕಾಡೆಮಿಯ ಕ್ರೀಡಾ ಪಟುಗಳು ಪ್ರೊ ಕಬಡ್ಡಿ ತನಕ ಬೆಳೆದರು. ಸುಳ್ಯದ ಹೆಸರನ್ನು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗುರುತಿಸುವಂತೆ ಮಾಡಿದರು. ಅಂತಹ ಕ್ರೀಡಾಪಟುಗಳಲ್ಲಿ ಮಂಡ್ಯ ಮೂಲದ ಅಭಿಷೇಕ್ ಕೂಡ ಒಬ್ಬರು ಅನ್ನೋದು ವಿಶೇಷ.
ಆಭಿಷೇಕ್ ಎಸ್. ಮೂಲತಃ ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿ ಪಾಂಡವಪುರದವರು. ತಂದೆ ನಾಗೇಶ್ ಹಾಗೂ ತಾಯಿ ಸುವರ್ಣ ದಂಪತಿಯ ಪುತ್ರ. ವೃತ್ತಿಯಲ್ಲಿ ಇವರದ್ದು ಮಧ್ಯಮ ವರ್ಗದ ರೈತ ಕುಟುಂಬ. ಶ್ರೀ ಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಪಾಂಡವಪುರ ಇಲ್ಲಿ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸ ಪಡೆದುಕೊಂಡರು. ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಇವರು ತಮ್ಮ 8ನೇ ವಯಸ್ಸಿನಿಂದಲೇ (2ನೇ ತರಗತಿ) ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಕ್ಯಾತನಳ್ಳಿ ಕ್ರೀಡಾ ಒಕ್ಕೂಟ ಎಂಬ ಕ್ಲಬ್ ಒಂದರಲ್ಲಿ ಸಕ್ರೀಯ ಸದಸ್ಯರಾಗಿದ್ದರು. ಈ ಸಂದರ್ಭ ಸೀನಿಯರ್ಸ್ ಕಬಡ್ಡಿ ಆಡುವುದನ್ನು ನೋಡುತ್ತಲೇ ಕಬಡ್ಡಿಯತ್ತ ಆಕರ್ಷಿತರಾದರು.
2016ರಲ್ಲಿ ಅಕ್ಷಯ್ ಕೆ.ಸಿ ಅವರು ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಿದ್ದರು. ಈ ಅಕಾಡೆಮಿಯಲ್ಲಿ ಅವಕಾಶ ಅರಸಿಕೊಂಡು ನೂರಾರು ಕ್ರೀಡಾಪಟುಗಳು ಬಂದಿದ್ದರು. ಇಂತಹ ಅಕಾಡೆಮಿಗೆ ಸ್ಪೋರ್ಟ್ಸ್ ಕೋಟಾದಡಿಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳ ಪೈಕಿ ಮಂಡ್ಯದ ಅಭಿಷೇಕ್ ಕೂಡ ಒಬ್ಬರು. ಪ್ರಥಮ ಪಿಯುಸಿಗೆ ದಾಖಲಾದಾಗ ಅಭಿಷೇಕ್ ಎಸ್ ದೇಹದ ತೂಕ 85 ಕೆ.ಜಿ ಇತ್ತು. ಪಿಯು ಮಟ್ಟದ ಕಬಡ್ಡಿಗೆ ದೇಹದ ತೂಕ 75 ಕೆ.ಜಿ ಇರಬೇಕೆಂಬ ನಿಯಮ ಇದ್ದುದರಿಂದ NMC ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ್ ಛಲ ಬಿಡದೆ ಆತನ್ನು ಸತತ ಒಂದು ತಿಂಗಳ ಕಾಲ ಕುರುಂಜಿ ಗುಡ್ಡೆಯಲ್ಲಿ ಅಪ್ ಹಿಲ್ ಟ್ರೈನಿಂಗ್ ನೀಡಿ 20 ಕೆ.ಜಿ ತೂಕವನ್ನು ಇಳಿಸಿಕೊಳ್ಳಲು ನೆರವಾಗ್ತಾರೆ. ಹಲವು ಶ್ರಮದ ಬಳಿಕ ವಿವಿಧ ಕೂಟಗಳಲ್ಲಿ ಅಭಿಷೇಕ್ ಮಿಂಚಿ ಹೆಸರು ಮಾಡಿದರು.
ಪ್ರೋ ಕಬಡ್ಡಿಯಲ್ಲಿ 21 ವರ್ಷದ ಕೆಳಗಿನ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ NYP (New Young Player) ಎಂಬ ವಿಶೇಷ ಅವಕಾಶದಡಿ ಆಯ್ಕೆ ಪ್ರಕ್ರಿಯೆ ಇರುತ್ತದೆ. ಹೀಗೆ ಅಭಿಷೇಕ್ ಮುಂಬೈಗೆ ಕಬಡ್ಡಿ ಮ್ಯಾಚ್ ಆಡಲೆಂದು ತೆರಳಿದ್ದ ವೇಳೆ ಅಲ್ಲಿ ಪ್ರೋ ಕಬಡ್ಡಿ ಸೆಲೆಕ್ಷನ್ ಕಮಿಟಿಯವರು ಕೂಡ ಆಗಮಿಸಿದ್ದರು. ಈತನ ಆಟವನ್ನು ನೋಡಿ ಗುರುತಿಸಿದರು. ಸಂಗ್ರಾಮ್ ಎಂಬ ಕೋಚ್ ಒಬ್ಬರು ಈತನನ್ನು ಉತ್ತರ ಪ್ರದೇಶಕ್ಕೆ ಪ್ರೋ ಕಬಡ್ಡಿ ಸೆಲೆಕ್ಷನ್ ಮ್ಯಾಚ್ ಆಡಲು ಕಳುಹಿಸಿಕೊಡ್ತಾರೆ. ಅಲ್ಲಿ ಅಭಿಷೇಕ್ ಆಟವನ್ನು ನೋಡಿ ಸಂಜೀವ್ ಬಾಲಿಯಾರ್ ಹಾಗೂ ಉಪೇಂದ್ರ ಎಂಬ ತರಬೇತುದಾರರು ಪ್ರೋ ಕಬಡ್ಡಿ ತಂಡಕ್ಕೆ ಆಯ್ಕೆ ಮಾಡ್ತಾರೆ. ಮುಂದೆ ಆಭಿಷೇಕ್ NYP ಅಗ್ರಿಮೆಂಟ್ ಗೆ ಸಹಿ ಮಾಡಿದರು. 2023-2024 ನೇ ಸಾಲಿನ ಪ್ರೋ ಕಬಡ್ಡಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದಲ್ಲಿ ಆಡಲಿದ್ದಾರೆ.
ಇವರನ್ನು ಅರಸಿಕೊಂಡು ಹಲವಾರು ಪ್ರಶಸ್ತಿ ಹಾಗೂ ಸನ್ಮಾನಗಳು ಬಂದಿವೆ. ಸೀನಿಯರ್ ಸ್ಟೇಟ್ ಚಾಂಪಿಯನ್ ಶಿಪ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ, ಪ್ರೋ ಕಬಡ್ಡಿ ಪ್ರಥಮ ಪಂದ್ಯದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿ, ಹೆಚ್ ಪಿ ಕೆ ಲ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
“ನನ್ನ ಮೊಣಕಾಲಿಗೆ ಒಮ್ಮೆ ಆಳವಾದ ಗಾಯ (knee injury) ಆಗಿತ್ತು. ಆಗ ನನಗೆ ಕಾಲಿಗೆ ಆಪರೇಷನ್ ಹಾಗೂ ಫಿಸಿಯೋಥೆರಪಿ, ಎಲ್ಲಾ ರೀತಿಯ ಚಿಕಿತ್ಸೆಯನ್ನು ಅಕಾಡೆಮಿಯಿಂದ ಅಕ್ಷಯ್ ಕೆ.ಸಿ ಅವರು ಉಚಿತವಾಗಿ ನೀಡಿದ್ದಾರೆ. ಬೇರೆ ಯಾವುದೇ ಕಾಲೇಜು ಹಾಗೂ ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಇಷ್ಟು ಸಪೋರ್ಟ್ ಹಾಗೂ ಸೌಲಭ್ಯ ದೊರೆಯಲು ಸಾಧ್ಯವಿಲ್ಲ. ರಿಯಲಿ ಗ್ರೇಟ್ ಫುಲ್. ಭಾರತೀಯ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆಯುವುದು ನನ್ನ ಮುಂದಿನ ಗುರಿ. ಸಾಧನೆಗೆ ಹೆತ್ತವರು, ಎನ್ ಎಂ ಸಿ ಯ ದೈಹಿಕ ಶಿಕ್ಷಕರು, ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿ ಕಾರಣ”
ಅಭಿಷೇಕ್, ಪ್ರೊ ಕಬಡ್ಡಿ ಆಟಗಾರ