ನ್ಯೂಸ್ ನಾಟೌಟ್: ನಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಸಂದರ್ಭ. ಯಾವ ಡಾಕ್ಟರ್ ಹತ್ತಿರ ಚಿಕಿತ್ಸೆಗೆ ಹೋಗೋದು ಅನ್ನೊ ಗೊಂದಲದಲ್ಲಿದ್ದೆವು. ಇಂತಹ ಸಮಯದಲ್ಲಿ ಒಂದಷ್ಟು ಜನರ ಅಭಿಪ್ರಾಯವನ್ನ ಕೂಡ ಕೇಳಿದೆವು. ಒಬ್ಬೊಬ್ಬರು ಒಬ್ಬೊಬ್ಬ ವೈದ್ಯರ ಹೆಸರನ್ನು ಹಾಗೂ ಆಸ್ಪತ್ರೆಯ ಪಟ್ಟಿಯನ್ನು ನಮಗೆ ನೀಡಿದ್ರು. ಮಂಗಳೂರಿಗೆ ಹೋಗಿ..ಕೆಲವರು ಪುತ್ತೂರಿಗೆ ಹೋಗಿ ಅಂತ ಸಲಹೆ ನೀಡಿದ್ರು. ಏಳು ವರ್ಷಗಳ ಹಿಂದೆ ನಮ್ಮ ಮೊದಲನೇ ಮಗು ಸಮನ್ಯುವಿನ ಹೆರಿಗೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಾಡಿಕೊಂಡಿದ್ದೆವು. ಅಲ್ಲಿಯ ವೈದ್ಯರ, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ನಾವು ಅನುಭವಿಸಿದ ನೋವುಗಳನ್ನು ಪದಗಳಲ್ಲಿ ಹೇಳೋಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಹೋಗುವ ಸಾಹಸವನ್ನು ನಾವು ಮಾಡಲೇ ಇಲ್ಲ. ಮಂಗಳೂರಿಗೆ ಹೋಗುವ ವ್ಯರ್ಥ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ಈ ಸಲ ನಮ್ಮೂರಿನ ಕೆವಿಜಿ ಆಸ್ಪತ್ರೆ ಇದೆಯಲ್ವ..ಇಲ್ಲಿಯೇ ವೈದ್ಯರಿಗೆ ತೋರಿಸೋಣ ಎಂಬ ತೀರ್ಮಾನಕ್ಕೆ ಬಂದೆವು. ಇದಕ್ಕೆ ನನ್ನ ಪತಿ ಹೇಮಂತ್ ಸಂಪಾಜೆ ಕೂಡ ಸಹಮತ ವ್ಯಕ್ತಪಡಿಸಿದರು.
ಅಂತೆಯೇ ಸ್ತ್ರಿ ತಜ್ಞೆ ಡಾ|ಗೀತಾ ದೊಪ್ಪ ಬಳಿ ಮೂರನೇ ತಿಂಗಳಿನಿಂದ ಸೂಕ್ತ ಸಲಹೆ ಸೂಚನೆ, ಚಿಕಿತ್ಸೆ ಪಡೆದುಕೊಳ್ಳುತ್ತಾ ಬಂದೆ. ಗೀತಾ ಅವರು ಗಟ್ಟಿ ಧ್ವನಿಯಿಂದ ಮಾತನಾಡುತ್ತಾರೆ. ಮೊದಮೊದಲಿಗೆ ಅವರನ್ನು ನೋಡುವವರಿಗೆ ಸ್ವಲ್ಪ ಅಳುಕಾದರೂ ಅವರಲ್ಲೊಬ್ಬ ತಜ್ಞ ವೈದ್ಯೆಯನ್ನು ನಾನು ಕಂಡೆ. ಪ್ರತಿ ಸಲ ಅವರನ್ನು ನಾನು ಭೇಟಿಯಾದಾಗಲೂ ಅನುಸರಿಸಬೇಕಾದ ಕ್ರಮಗಳು ಹಾಗೂ ಮಗುವಿನ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದರು. ಕೊನೆಗೂ ಹೆರಿಗೆಯ ದಿನ ಬಂತು (ಏ.12), ಮೊದಲಿನ ಮಗು ಸೀಸರಿಯನ್ ಆಗಿತ್ತು. ಈ ಸಲವೂ ಸೀಸರಿಯನ್ ಗ್ಯಾರಂಟಿ ಅಂದುಕೊಂಡೆ. ಈ ಪ್ರಕಾರವಾಗಿ ವೈದ್ಯರು ಕೂಡ ಸೀಸರಿಯನ್ ಅಂತಲೇ ಹೇಳಿದ್ರು. ಮಾನಸಿಕವಾಗಿ ನಾನು ತಯಾರಾಗಿದ್ದರಿಂದ ಈ ವಿಚಾರ ನಂಗೆ ಹೆಚ್ಚು ಆಘಾತವನ್ನೆನೂ ತರಲಿಲ್ಲ. ನನ್ನನ್ನು ಆಪರೇಷನ್ ಥೀಯೆಟರ್ ಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಳು ವರ್ಷದ ಹಿಂದೆ ನಡೆದಿದ್ದ ಕಹಿ ಘಟನೆಯೊಂದು ಹಾಗೇ ನೆನಪಿಗೆ ಬಂತು. ಅಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೀಸರಿಯನ್ ಆದ ಬಳಿಕ ನನ್ನನ್ನು ಐಸಿಯುನಲ್ಲಿರಿಸಿದ್ದರು. ಮಗುವನ್ನು ಲೈಟ್ ಬಾಕ್ಸ್ ನಲ್ಲಿರಿಸಿದ್ದರು (ಹಳದಿ ರೋಗದಿಂದ ರಕ್ಷಿಸುವುದಕ್ಕೆ). ಒಂದು ದಿನವಿಡೀ ಮಗುವಿಗೆ ಹಾಲುಣಿಸುವುದಕ್ಕೂ ಬಿಟ್ಟಿರಲಿಲ್ಲ. ಇದರಿಂದಾಗಿ ಮಗು ಬಾಟಲಿಯಲ್ಲಿ ಹಾಲು ಕುಡಿಯುವಂತಾಯಿತು. ಮುಂದಿನ ದಿನಗಳಲ್ಲಿ ಮಗುವಿನ ಆರೋಗ್ಯದಲ್ಲೇ ವ್ಯತ್ಯಯವಾಗಿ ನಾವು ತಿಂಗಳಾನುಗಟ್ಟಲೇ ಆಸ್ಪತ್ರೆಗೆ ಓಡಾಡುವಂತಾಯಿತು. ಮಗುವಿಗೆ ಬಂದನಾರಿನ ಕಷಾಯ ಮಾಡಿ ಹಾಲಿನ ಜೊತೆ ಮಿಕ್ಸ್ ಮಾಡಿ ಕೊಡಬೇಕಾಯಿತು. ಇಂತಹ ಪರಿಸ್ಥಿತಿ ಮುಂದೆ ಯಾವ ತಾಯಿಗೂ ಬರಬಾರದೆಂದು ಮನದಲ್ಲಿ ಅಂದುಕೊಳ್ಳುವಷ್ಟರಲ್ಲಿ ನಾನು ಕೆವಿಜಿ ಆಸ್ಪತ್ರೆಯ ಆಪರೇಷನ್ ಥೀಯೆಟರ್ ಗೆ ತಲುಪಿ ಆಗಿತ್ತು. ಡಾ| ಗೀತಾ ದೊಪ್ಪ , ಡಾ| ರವಿಕಾಂತ್ ಮತ್ತು ಅವರ ವೈದ್ಯಕೀಯ ತಂಡ ಮಗುವನ್ನು ಸೀಸರಿಯನ್ ಮಾಡಿ ಹೊರತೆಗೆದರು. ನಿಮಗೆ ಗಂಡು ಮಗುವಾಗಿದೆ ಎಂದು ಹೇಳಿದರು. ಎರಡನೇ ಮಗು ಹೆಣ್ಣೆಂಬ ನಿರೀಕ್ಷೆಯಲ್ಲಿದ್ದ ನಮಗೆ ಸ್ವಲ್ಪ ಕಷ್ಟವಾದರೂ ದೇವರ ಆಶೀರ್ವಾದವನ್ನು ಒಪ್ಪಿಕೊಳ್ಳಲೇಬೇಕು. ಈ ಹಿಂದೆ ಪುತ್ತೂರಿನ ಆಸ್ಪತ್ರೆಯಲ್ಲಿ ನನ್ನ ಮೊದಲನೇ ಮಗುವನ್ನು ಲೈಟ್ ಕೋಣೆಯಲ್ಲಿಟ್ಟು, ನನ್ನನ್ನು ಐಸಿಯುನಲ್ಲಿಟ್ಟು ಒಂದು ದಿನವಿಡೀ ಅವೈಜ್ಞಾನಿಕವಾಗಿ ಚಿಕಿತ್ಸೆ ನೀಡಿ ಮಗು ತಾಯಿ ಹಾಲನ್ನು ಕುಡಿಯದಂತೆ ಮಾಡಿದ್ದರು. ಈ ಸಲ ಮತ್ತೆ ಆಗುವುದೇ ಮತ್ತೊಂದು ಸಲ ನಾನು ತೊಂದರೆಗೆ ಸಿಲುಕುವೆನೇ ಅನ್ನುವ ಹೆದರಿಕೆ ನನ್ನನ್ನು ಬಹಳಷ್ಟು ಕಾಡಿತ್ತು. ಆದರೆ ಕೆವಿಜಿಯ ವೈದ್ಯರು, ನರ್ಸ್ , ಸಿಬ್ಬಂದಿ ನನ್ನ ಹೆದರಿಕೆಯನ್ನು ನಿಜಕ್ಕೂ ದೂರ ಮಾಡಿದರು. ಹೆರಿಗೆಯಾದ ಕೆಲವೇ ಸಮಯದಲ್ಲಿ ಮಗು ತಾಯಿ ಹಾಲನ್ನು ಕುಡಿಯುವುದಕ್ಕೆ ಹೆಚ್ಚಿನ ಸಮಯ ನೀಡಿದರು. ಮಗು ತಾಯಿಯ ಜೊತೆಯೇ ಇರುವಂತೆಯೇ ನೋಡಿಕೊಂಡರು. ಎರಡು ದಿನ ಸಂಪೂರ್ಣವಾಗಿ ತಾಯಿ ಜೊತೆ ಇದ್ದು ತಾಯಿ ಹಾಲಿಗೆ ಎಡ್ಜೆಸ್ಟ್ ಆದ ಬಳಿಕ ಹಳದಿ ರೋಗದಿಂದ ಮಗುವನ್ನು ರಕ್ಷಿಸುವುದಕ್ಕೆ ಲೈಟ್ ಬಾಕ್ಸ್ ತಂದಿಟ್ಟರು. ನಮ್ಮ ಮಗು ಅಲ್ಲಿಗೆ ಸಂಪೂರ್ಣ ಸೇಫ್ ಅನ್ನುವ ವಾತಾವರಣವನ್ನು ಕೆವಿಜಿಯ ವೈದ್ಯರು, ಸಿಬ್ಬಂದಿ ನಿರ್ಮಿಸಿದರು. ಕೇವಲ ಮೂರು ದಿನದಲ್ಲಿ ನಮ್ಮನ್ನು ಡಿಸ್ಚಾರ್ಜ್ ಕೂಡ ಮಾಡಿದರು.
ಕೆವಿಜಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡದ ಜತೆಗೆ ,ಕಲಿಕಾ ವಿದ್ಯಾರ್ಥಿಗಳಿಂದಲೂ ಉಪಯುಕ್ತ ಮಾಹಿತಿ ತಾಯಿಗೆ ಸಿಕ್ಕಿತು. ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಮಾಡಲಾಗುತ್ತದೆ. ತಾಯಿಯೊಬ್ಬಳಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ಆಕೆಗೆ ಮಾಹಿತಿ ಕೊರತೆಯಿರುತ್ತದೆ. ಜತೆಗೆ ಈಗಿನ ಆಧುನಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಮನೆಯವರಿಗೂ ಅರಿವಿಲ್ಲದ ಕಾರಣ ತಾಯಿಯಾದವಳಿಗೆ ಈ ಬಗೆಗಿನ ಮಾಹಿತಿ ನೀಡೋದು ಅತ್ಯಗತ್ಯ. ಈ ವಿಚಾರದಲ್ಲಿ ಕೆವಿಜಿ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರು, ಸಿಬ್ಬಂದಿ ವಿಭಿನ್ನವಾಗಿ ನಿಲ್ಲುತ್ತಾರೆ. ತಾಯಿ ಮತ್ತು ಮಗು ಒಂದು ಕ್ಷಣವೂ ಬಿಟ್ಟಿಲಾರದೆ ಒಟ್ಟಿಗೆ ಇರಬೇಕೆನ್ನುವ ಕಾನ್ಸೆಪ್ಟ್ ಜತೆಗೆ ತಾಯಿ ಈ ಹಂತದಲ್ಲಿ ಹೇಗಿರಬೇಕು, ಹೇಗೆಲ್ಲಾ ಎಚ್ಚರಿಕೆಯಿಂದ ಇರಬೇಕು ಇತ್ಯಾದಿಗಳ ಜತೆಗೆ ಸಂಪೂರ್ಣ ವಿಚಾರಗಳ ಬಗ್ಗೆಯೂ ಸಮಗ್ರ ಮಾಹಿತಿಯನ್ನು ವೈದ್ಯರು ನೀಡುತ್ತಾರೆ. ಮೊದಲ ಮಗುವಿನಲ್ಲಿ ಆಸ್ಪತ್ರೆಯಲ್ಲಿ ಮಾಹಿತಿಯ ಕೊರತೆಯಿಂದ ಕಂಗಾಲಾಗಿದ್ದೆ. ಆದರೆ ಎರಡನೇ ಮಗುವಿನಲ್ಲಿ ವೈದ್ಯರುಗಳಿಂದ ಸಿಕ್ಕ ಆತ್ಮವಿಶ್ವಾಸದ ಮಾತುಗಳಿಂದ ನನ್ನಲ್ಲೂ ಭರವಸೆ ಮೂಡಿತು. ನಾನಿಲ್ಲಿ ಮತ್ತೊಂದು ವಿಚಾರವನ್ನು ಹೇಳಲೇಬೇಕು. ಹೆರಿಗೆಯಾದ ಬಳಿಕ ಆಸ್ಪತ್ರೆಯ ಬಿಲ್ ಮಂಗಳೂರಿನ ಆಸ್ಪತ್ರೆಯಲ್ಲಿ 60 ಸಾವಿರಕ್ಕೂ ಅಧಿಕ ಬಂದಿದ್ದನ್ನು ಕೇಳಿದ್ದೇವೆ. ಈ ಬೆಲೆಗೆ ಹೋಲಿಕೆ ನಡೆಸಿದಾಗ ಕೆವಿಜಿಯಲ್ಲಿ ಅಗ್ಗದ ದರಕ್ಕೆ ಚಿಕಿತ್ಸೆ ಸಿಗುತ್ತದೆ. ಇಷ್ಟೆಲ್ಲ ಸೌಲಭ್ಯ ಇರುವುದು ದೂರದ ಊರಿನಲ್ಲಿ ಅಲ್ಲ. ನಮ್ಮದೇ ಸುಳ್ಯದಲ್ಲಿ. ದಿವಂಗತ ಕುರುಂಜಿ ವೆಂಕಟರಮಣ ಗೌಡರು ಕಟ್ಟಿದ ಸಂಸ್ಥೆಯಲ್ಲಿ. ಇದೀಗ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾಗಿರುವ ಡಾ|ಕೆ.ವಿ ಚಿದಾನಂದ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸಲಿ ಎಂದು ಹಾರೈಸೋಣ.