ನ್ಯೂಸ್ ನಾಟೌಟ್: ಲೋಕಸಭಾ ಅಭ್ಯರ್ಥಿ ಹಾಗೂ ಬಿಜೆಪಿ ಸಂಸದ ಖಗೇನ್ ಮುರ್ಮು ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಡುತ್ತಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ತಮ್ಮ ಸಂಸದೀಯ ಕ್ಷೇತ್ರವಾದ ಚಂಚಲ್ನ ಶ್ರೀಹಿಪುರ ಗ್ರಾಮದಲ್ಲಿ ಸೋಮವಾರ(ಎ.8) ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಖಗೆನ್ ಮುರ್ಮು ಮಹಿಳೆಯನ್ನು ಚುಂಬಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು “ಮಹಿಳಾ ವಿರೋಧಿ ರಾಜಕಾರಣಿಗಳ ಪಕ್ಷದಲ್ಲಿ ಕೊರತೆಯಿಲ್ಲ” ಎಂದು ಹೇಳುವ ಮೂಲಕ ಬಿಜೆಪಿಯನ್ನು ಟೀಕಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಈ ನಡುವೆ ಖಗೇನ್ ಮುರ್ಮು ಕೂಡ ಪ್ರತಿಕ್ರಿಯೆ ನೀಡಿದ್ದು, ಆಕೆ ಮಗುವಿನಂತೆ ಎಂದು ಹೇಳುವ ಮೂಲಕ ತಾವು ಮುತ್ತುಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
“ಮಗುವಿಗೆ ಮುತ್ತು ಕೊಡುವುದರಲ್ಲಿ ತಪ್ಪೇನಿಲ್ಲ. ಇದು ಸಂಪೂರ್ಣ ತಳಮಟ್ಟದ ಪಿತೂರಿ. ಅವರಿಗೆ ಅಂತಹ ಕೆಟ್ಟ ಮೌಲ್ಯಗಳಿವೆ” ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ.