ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿಯನ್ನು ಥಳಿಸಿದ ಮುಸ್ಲಿಂ ಯುವಕರು..! ದಾರಿ ತಪ್ಪಿದ ನೈತಿಕ ಪೊಲೀಸ್ ಗಿರಿ, ಕುಟುಂಬಸ್ಥರು ಕಂಗಾಲು..!

ನ್ಯೂಸ್ ನಾಟೌಟ್ : ಪ್ರೇಮಿಗಳೆಂದು (Lovers) ಭಾವಿಸಿ ಸಹೋದರ ಮತ್ತು ಸಹೋದರಿ ಮೇಲೆ ಅನ್ಯಕೋಮಿನ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಬೆಳಗಾವಿಯ (Belagavi) ಕೋಟೆ ಕರೆ ಆವರಣದಲ್ಲಿ ನಡೆದಿದೆ. ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು, ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ಕಂಡ ಅನ್ಯಕೋಮಿನ 16 ಜನ ಯುವಕರ ಗ್ಯಾಂಗ್​ ಹಿಂದೂ‌ ಯುವಕ, ಮುಸ್ಲಿಂ ಯುವತಿ ಪ್ರೇಮಿಗಳೆಂದು ಥಳಿಸಿದ್ದಾರೆ. ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು ಎನ್ನಲಾಗಿದೆ. ನಂತರ ಹತ್ತಿರವೊಂದರ ಕೊಠಡಿಯಲ್ಲಿ 2-3 ಗಂಟೆಗಳ ಕಾಲ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಯುವತಿ ಮೊಬೈಲ್ ನಿಂದ ಕುಟುಂಬಸ್ಥರಿಗೆ ಕರೆ‌‌ ಮಾಡಿದ್ದಾರೆ. ಆಗ ಕುಟುಂಬಸ್ಥರು ಅವರಿಬ್ಬರು ಸಹೋದರಿ, ಸಹೋದರರು ಅಂತ ಹೇಳಿದರೂ ನಂಬದೆ, ಮೊಬೈಲ್ ಸ್ವೀಚ್ ಆಫ್ ಮಾಡಿ ಮತ್ತೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಯುವಕ ಮತ್ತು ಯುವತಿ ತಾವು ಸಹೋದರಿ, ಸಹೋದರ ಅಂತಾ ಹೇಳಿದರೂ ದುಷ್ಕರ್ಮಿಗಳು ನಂಬಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೊಬೈಲ್​ ಲೋಕೇಶ್ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ. 16 ಜನರಲ್ಲಿ ಓರ್ವ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡ ಯುವತಿ ಮತ್ತು ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಇನ್ನು ಯುವತಿಯ ತಾಯಿ ಹಿಂದೂ, ತಂದೆ ಮುಸ್ಲಿಂ ಆಗಿದ್ದು, ಪ್ರೀತಿಸಿ ಮದುವೆ ಆಗಿದ್ದಾರೆ. ಯುವತಿ ತನ್ನ ಚಿಕ್ಕಮ್ಮನ ಮಗನ ಜತೆಗೆ ಅರ್ಜಿ ಹಾಕಲು ಹೋದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.