ನ್ಯೂಸ್ ನಾಟೌಟ್ : ಈ ಬಾರಿ ಭಾರತ ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತೆ ಅನ್ನುವ ಆತ್ಮವಿಶ್ವಾಸ ಅನೇಕ ಕ್ರೀಡಾಭಿಮಾನಿಗಳಲ್ಲಿತ್ತು.ಆದರೆ ದುರದೃಷ್ಟವಶಾತ್ ಕೋಟ್ಯಂತರ ಭಾರತೀಯರ ಆಸೆಯನ್ನು ಭಗ್ನಗೊಳಿಸಿ ವಿಶ್ವಕಪ್ ಕಿರೀಟವನ್ನು ಆಸ್ಟ್ರೇಲಿಯಾ ಮುಡಿಗೇರಿಸಿಕೊಂಡಿದೆ.ಇದೀಗ ಕ್ರಿಕೆಟ್ನಲ್ಲಿ ಭಾರತ ಗೆಲ್ಲದಿದ್ದರೂ ಆಸ್ಟ್ರೇಲಿಯಾ ಗೆಲುವಿಗೆ ಭಾರತೀಯಳೊಬ್ಬರ ಪಾತ್ರ ಪ್ರಮುಖವಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ.ಹೌದು,ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಭಾರತದವರು..!ಮಾತ್ರವಲ್ಲ ಕರ್ನಾಟಕದ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೊ ಎಂಬುವವರೇ ಆಸ್ಟೇಲಿಯಾ ಕ್ರಿಕೆಟ್ ತಂಡದ ಮೆನೇಜರ್..!
ಸುಮಾರು 34 ವರ್ಷ ಪ್ರಾಯದ ಊರ್ಮಿಳಾ ಅವರು ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ.ಊರ್ಮಿಳಾ ಅವರು ದೋಹಾದಲ್ಲಿ ಜನಿಸಿದ್ದು, ಈಕೆಯ ತಂದೆ, ತಾಯಿ ಕತಾರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇವರ ತಂದೆ-ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು ಸಕಲೇಶಪುರದಲ್ಲಿ ನೆಲೆಸಿದ್ದಾರೆ.ಊರ್ಮಿಳಾ ರೊಸಾರಿಯೋ ಕಾರ್ನೆಗಿ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರು. ತನ್ನ ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಅವರು ಕತಾರ್ ಟೆನಿಸ್ ಫೆಡರೇಶನ್ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಅವರು ಮೊದಲು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಬಳಿಕ ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಮೇನೇಜರ್ ಆಗಿ ಭಡ್ತಿ ಪಡೆದರು.
ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಕತಾರ್ನಲ್ಲಿ ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಬಳಿಕ ಈ ವರ್ಷದ ಸೆಪ್ಟೆಂಬರ್ನಲ್ಲಿ ಕತಾರ್ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ವಿಶ್ವಕಪ್ಗಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ನೇತೃತ್ವ ವಹಿಸಿದರು. ಆಸ್ಟ್ರೇಲಿಯಾ ವಿಶ್ವಕಪ್ ನಿರ್ವಹಣೆಗೆ ಪುರುಷರ ತಂಡದೊಂದಿಗೆ ಭಾರತಕ್ಕೆ ಬಂದಿದ್ದ ಊರ್ಮಿಳಾ ಶೀಘ್ರವೇ ಮತ್ತೆ ತನ್ನ ಮಹಿಳಾ ಕ್ರಿಕೆಟ್ ತಂಡ ಸೇರಲಿದ್ದಾರೆ. ಆ ತಂಡದ ಜತೆ ಡಿಸೆಂಬರ್ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಊರ್ಮಿಳಾ ಆಸ್ಟ್ರೇಲಿಯಾ ಪ್ರಜೆ ಅಲ್ಲದಿದ್ದರೂ ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಯೋಜನೆ ಮಾಡಿರುವುದು ಆಶ್ಚರ್ಯಕರ ಎನ್ನುತ್ತಾರೆ ಆಕೆಯ ಹೆತ್ತವರು. ಊರ್ಮಿಳಾ ಕನ್ನಡ, ಹಿಂದಿ ಹಾಗೂ ಕೊಂಕಣಿಯನ್ನು ಮಾತನಾಡುತ್ತಾರೆ. ಈ ವರ್ಷ ಮಾರ್ಚ್ನಲ್ಲಿ ಊರ್ಮಿಳಾ ಅವರು ತನ್ನ ಪೋಷಕರನ್ನು ಭೇಟಿ ಮಾಡಿದ್ದರು. ಎಸ್ಟೇಟ್ನಲ್ಲಿ ತನ್ನ ತಂದೆ ಜತೆ ಕೆಲಸ ಮಾಡಿದ್ದರು. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರ ಕುಟುಂಬದ ಓರ್ವರು ಮಂಗಳೂರಿನಲ್ಲಿ ಐಎಸ್, ಐಪಿಎಸ್ ಉನ್ನತ ಶಿಕ್ಷಣ ಪಡೆಯಲು ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಕೋಚಿಂಗ್ ಸಂಸ್ಥೆಯ ಮೂಲಕ ನೆರವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಆಸ್ಟ್ರೇಲಿಯಾ ಪಂದ್ಯಗಳನ್ನು ಊರ್ಮಿಳಾ ಪೋಷಕರು ವೀಕ್ಷಿಸಿದ್ದರು. ಆದರೆ ಫೈನಲ್ ಪಂದ್ಯ ವೀಕ್ಷಿಸಲು ಬಯಸಿದರೂ ಎಸ್ಟೇಟ್ ಕೆಲಸ ಬಿಟ್ಟು ಬರಲಾಗದೆ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಊರ್ಮಿಳಾ.