ನ್ಯೂಸ್ ನಾಟೌಟ್: ಬೆಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಭಾನುವಾರ ಸಂಜೆ 6.30ಕ್ಕೆ ಜನ ಜಂಗುಳಿ ನಡುವೆ ವ್ಯಕ್ತಿಯೊಬ್ಬ ಮಹಿಳೆಯರು, ಯುವತಿಯರನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತ ಸುತ್ತಿದ್ದ. ಇದನ್ನು ಗಮನಿಸಿದ ಮಾಲ್ಗೆ ಬಂದಿದ್ದ ಮತ್ತೋರ್ವ ವ್ಯಕ್ತಿಯು ಮೊಬೈಲ್ನಲ್ಲಿ ಆತನ ದೃಶ್ಯ ಸೆರೆ ಹಿಡಿದಿದ್ದರು.
ಪ್ರತಿಷ್ಠಿತ ಲುಲು ಮಾಲ್ ನಲ್ಲಿ (Mall) ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದೃಶ್ಯ ಆಧರಿಸಿ ಪೊಲೀಸರು ಆರೋಪಿಯ ಗುರುತನ್ನು ಪತ್ತೆಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ (Bengaluru) ಬಸವೇಶ್ವರನಗರದ (Basaveshwara Nagar) ನಿವಾಸಿ ಅಶ್ವಥ್ ನಾರಾಯಣ್ (60) ಎಂಬಾತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ಮಾಲ್ವೊಂದರಲ್ಲಿ ಈತ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯಶವಂತ್ ಎಂಬವರು ಇದನ್ನು ವಿಡಿಯೋ ಚಿತ್ರೀಕರಿಸಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಲ್ ಮ್ಯಾನೇಜರ್ ಆರೋಪಿ ವಿರುದ್ಧ ಕೇಸ್ ದಾಖಲಿಸಿದ್ದರು.
ಈ ವಿಡಿಯೋ ಆಧರಿಸಿ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದಾರೆ. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಿ ಕಳೆದ ಎಂಟು ತಿಂಗಳ ಹಿಂದೆ ನಿವೃತ್ತನಾಗಿದ್ದ ಎನ್ನಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಆರೋಪಿ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.