ನ್ಯೂಸ್ ನಾಟೌಟ್ : ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ‘ಸುಳ್ಯ ದಸರಾ’ ಉತ್ಸವ ಅದ್ದೂರಿಯಾಗಿ ನಡೆಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಅ.20 ರಿಂದ 28ರವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿಈ ಉತ್ಸವವು ವೈಭವದಿಂದ ಕೂಡಿರಲಿದೆ.ಈ ಅದ್ದೂರಿ ಸುಳ್ಯ ದಸರಾ ಉತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್ “ಈ ಬಾರಿ ಶೋಭಾಯಾತ್ರೆಯ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಮಧ್ಯಾಹ್ನದ ಬಳಿಕ 3 ಗಂಟೆಗೆ ಸರಿಯಾಗಿ ಶೋಭಾಯಾತ್ರೆ ಹೊರಡಲಿದೆ.ರಾತ್ರಿ 12 ಗಂಟೆಗೆ ಶೋಭಾಯಾತ್ರೆ ಮುಕ್ತಾಯವಾಗಲಿದೆ. ಒಂದು ಗಂಟೆಯ ಬಳಿಕ ಚಂದ್ರಗ್ರಹಣ ಇರುವ ಕಾರಣ ರಾತ್ರಿ ಒಂದು ಗಂಟೆಯ ಮೊದಲು ಮೂರ್ತಿಯ ಜಲಸ್ತಂಭನ ನಡೆಯಬೇಕಾಗಿದೆ” ಎಂದು ಹೇಳಿದರು.
ಶ್ರೀ ಶಾರದಾಂಬಾ ಸೇವಾ ದಸರಾ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ ಹಾಗೂ ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಮಾತನಾಡಿ ‘ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾಕ್ಕೆ ಅದ್ದೂರಿ ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗಿದೆ.ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಳ್ಯ ದಸರಾ ಉತ್ಸವ ನಡೆಯಲಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ.ಕೆ, ಪದಾಧಿಕಾರಿಗಳಾದ ರಾಜು ಪಂಡಿತ್, ಸತೀಶ್ ಎನ್.ಕೆ, ಮಂಜುನಾಥ ಬಳ್ಳಾರಿ, ದೀಪಕ್ ಪಿ.ಎಸ್, ಕುಸುಮಾಧರ ರೈ ಬೂಡು, ಪದ್ಮನಾಭ ಅರ್ಭಡ್ಕ, ಹೇಮನಾಥ ಕೇರ್ಪಳ ಉಪಸ್ಥಿತರಿದ್ದರು.