ನ್ಯೂಸ್ ನಾಟೌಟ್: ಇತ್ತೀಚೆಗೆ ಗ್ರಾಮಗಳು ಕೂಡ ಶರವೇಗದಲ್ಲಿ ಬೆಳೆಯುತ್ತಿವೆ. ನಗರದಂತೆ ಗ್ರಾಮಗಳಲ್ಲೂ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ವಿವಿಧ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನ ಸವಾರರಿಗೆ ಮತ್ತು ಜನರಿಗೆ ಕಿರಿಕಿರಿ ಉಂಟು ಮಾಡುವ ವ್ಯಕ್ತಿಗಳಿಗೆ ದಂಡ ಹಾಕುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ನೃತೃತ್ವದಲ್ಲಿ ನಡೆದ ಪೊಲೀಸ್ ಇಲಾಖೆ, ವರ್ತಕರ ಸಂಘ, ವಾಹನ ಚಾಲಕ ಮಾಲೀಕರ ಸಂಘದ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.
ಪೇಟೆಯಲ್ಲಿ ಕಸ ಎಸೆದು ಹೋಗುವವರು, ಬಸ್ ನಿಲ್ಲಿಸುವ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಸೇರಿದಂತೆ ನಿಯಮ ಮೀರಿ ವರ್ತಿಸುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು.
ಇದೇ ವೇಳೆ ವರ್ತಕರು ಸಾರ್ವಜನಿಕರು ಹಸಿ ಹಾಗೂ ಒಣ ಕಸ ವಿಂಗಡಣೆ ಮಾಡಿಕೊಡಬೇಕೆಂದು ನಿರ್ಧರಿಸಲಾಯಿತು. ಪಂಚಾಯತ್ ವತಿಯಿಂದ ಅಂಗಡಿಗೆ ಕಸ ಹಾಕಲು ಗೋಣಿ ಹಾಗೂ ಬಕೆಟ್ ನೀಡುವುದು. ಕಸವನ್ನು ಸಂಗ್ರಹಣೆ ಮಾಡಲು ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ನಾಲ್ವರು ಮಹಿಳೆಯರು ಕಸ ವಿಲೇವಾರಿ ವ್ಯವಸ್ಥೆ ಮಾಡಬೇಕೆಂಬ ಚರ್ಚೆ ನಡೆಯಿತು. ಗೂನಡ್ಕದಿಂದ ಸಂಪಾಜೆ ತನಕ ಮನೆ ಮನೆಗೆ ಕಸ ಸಂಗ್ರಹಣೆ ಮಾಡುವುದು ಹಾಗೂ ಸಂಜೀವಿನಿ ಒಕ್ಕೂಟದ ಮೂಲಕ ಶುಲ್ಕ ಸಂಗ್ರಹಣೆ ಮಾಡುವುದಕ್ಕೂ ತೀರ್ಮಾನಿಸಲಾಯಿತು.