ನ್ಯೂಸ್ ನಾಟೌಟ್: ನ್ಯಾಯಾಲಯಗಳಲ್ಲಿ ಕೆಲವೊಮ್ಮೆ ವಿಚಿತ್ರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಕೆಲವೊಂದು ಅಷ್ಟೇ ವಿಚಿತ್ರವಾದ ತೀರ್ಪುಗಳು ಕೂಡ ಹೊರಬೀಳುವುದಿದೆ. ಇಂತಹುದೇ ಒಂದು ತೀರ್ಪಿಗೆ ಇದೀಗ ಕೇರಳ ಹೈಕೋರ್ಟ್ ಸಾಕ್ಷಿಯಾಗಿದೆ.
ವಿಚ್ಛೇದಿತ ಪೋಷಕರು (estranged parents) ಮೂರು ವರ್ಷದ ಮಗುವಿಗೆ ಯಾವ ಹೆಸರು ಇಡಬೇಕು ಎಂಬ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಅಪ್ಪ ತನಗೆ ಇಷ್ಟವಾಗುವ ಹೆಸರು ಹೇಳಿದರೆ ಅಮ್ಮ ತನಗೆ ಇಷ್ಟವಾದ ಹೆಸರನ್ನು ಸೂಚಿಸಿದಳು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಕೇರಳ ಹೈಕೋರ್ಟ್ ಮೆಟ್ಟಿಲೇರಿತು.
ಕೇರಳ ಹೈಕೋರ್ಟ್ನ ನ್ಯಾಯ್ಯಾಧೀಶ ಕುರಿಯನ್ ಥಾಮಸ್ ಅವರು ಕಳೆದ ತಿಂಗಳು ಆದೇಶ ನೀಡಿ, ಮಗುವಿನ ನಾಮಕರಣ ಮಾಡುವಾಗ ತಾಯಿಯ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆ ನೀಡಬೇಕು. ಹಾಗೆಯೇ, ಯಾವುದೇ ವಿವಾದಕ್ಕೆ ಆಸ್ಪದ ಉಂಟಾಗಬಾರದು ಎಂಬ ಕಾರಣಕ್ಕೆ ತಂದೆ ಸೂಚಿಸಿದ ಹೆಸರನ್ನು ಸೇರಿಸಬೇಕು ಎಂದು ಹೇಳಿತ್ತು. ಆದರೆ, ಪೋಷಕರಿಬ್ಬರೂ ಮಗಳಿಗೆ ನಾಮಕರಣ ಮಾಡುವ ವಿಷಯದಲ್ಲಿ ಕಚ್ಚಾಡುತ್ತಾ, ಹೆಸರಿನ ಕುರಿತು ಒಮ್ಮತಕ್ಕೆ ಬರಲು ನಿರಾಕರಿಸಿದರು.
ತಂದೆ-ತಾಯಿ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲೇ ಮಗು, 2020 ಫೆ 12ರಂದು ಜನಿಸಿತ್ತು. ಬಾಲಕಿಗೆ ನೀಡಿದ ಜನನ ಪ್ರಮಾಣಪತ್ರದಲ್ಲಿ ಹೆಸರಿಲ್ಲದ ಕಾರಣ, ಆಕೆಯ ತಾಯಿ ಹೆಸರು ನೋಂದಾಯಿಸಲು ಪ್ರಯತ್ನಿಸಿದರು. ಆದರೆ, ಜನನ ಮತ್ತು ಮರಣ ನೋಂದಣಾಧಿಕಾರಿ ಹೆಸರು ನೋಂದಾಯಿಸಲು ತಂದೆ-ತಾಯಿ ಇಬ್ಬರೂ ಹಾಜರಿರಬೇಕು ಎಂದು ಒತ್ತಾಯಿಸಿದರು. ಆದರೆ, ನಾಮಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಮಧ್ಯೆ ಒಮ್ಮತ ಏರ್ಪಡದ ಕಾರಣ ಕೇರಳ ಹೈಕೋರ್ಟ್ಗೆ ತಮ್ಮ ಸಮಸ್ಯೆಯನ್ನು ತಿಳಿಸಿದರು.
ಇಬ್ಬರ ನಡುವಿನ ಜಗಳದಲ್ಲಿ ಕೂಸು ಬಡವಾಗುತ್ತಿದೆ. ಇದರಿಂದ ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಗುವಿನ ಯೋಗಕ್ಷೇಮವೇ ಅಂತಿಮ ಉದ್ದೇಶವಾದ್ದರಿಂದ, ನ್ಯಾಯಾಲಯವು ನೀಡಿದ ಹೆಸರನ್ನು ಅಳವಡಿಸಿಕೊಳ್ಳಬೇಕು. ಒಟ್ಟಾರೆ ಸನ್ನಿವೇಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಈ ನ್ಯಾಯಾಲಯವು ಮಗುವಿಗೆ ಹೆಸರನ್ನು ಆಯ್ಕೆ ಮಾಡಲು ತನ್ನ ಪೋಷಕರ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಲು ಮುಂದಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ನ್ಯಾಯಾಲಯವು ಶೀಘ್ರವೇ ಮಗುವಿನ ಹೆಸರನ್ನು ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ.