ನ್ಯೂಸ್ ನಾಟೌಟ್ : ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಕರ್ತವ್ಯನಿರತರಾಗಿದ್ದಾಗ ಭಾರತದ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪದ ಮೇಲೆ ಚೆನ್ನೈನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರನ್ನು ಸೋಮವಾರ ವರ್ಗಾವಣೆಗೊಳಿಸಲಾಗಿದೆ. ಆ ಅಧಿಕಾರಿಯನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಅಲ್ಲಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅವರು ಭಾರತದ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿರುವ ವಿಡಿಯೊವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಅವರನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿದೆ ಎಂದು ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ರಾಷ್ಟ್ರ ಧ್ವಜವನ್ನು ಕಸದ ಡಬ್ಬಿಗೆ ಹಾಕಬೇಡಿ ಎಂದು ಹೇಳಿದ ನಂತರ ಸಬ್ ಇನ್ಸ್ ಪೆಕ್ಟರ್ ಆ ರಾಷ್ಟ್ರ ಧ್ವಜವನ್ನು ಕಸದ ಡಬ್ಬಿಯಿಂದ ಹೊರ ತೆಗೆಯುತ್ತಿರುವುದು ಕಂಡು ಬಂದಿದೆ.
ಅವರು ರಾಷ್ಟ್ರ ಧ್ವಜಗಳನ್ನು ಕಸದ ಡಬ್ಬಿಗೆ ಹಾಕುತ್ತಿದ್ದರು ಹಾಗೂ ನೀವೇಕೆ ಹಾಗೆ ಮಾಡುತ್ತಿದ್ದೀರಿ ಎಂದು ನಾವು ಪ್ರಶ್ನಿಸಿದೆವು ಎಂದು ಪ್ರೇಕ್ಷಕರು ಹೇಳುತ್ತಿರುವುದು ಆ ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಕೆಲವು ಪ್ರೇಕ್ಷಕರು ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಕ್ರೀಡಾಂಗಣದ 4ನೇ ದ್ವಾರದಿಂದ ಪ್ರವೇಶಿಸಲು ಯತ್ನಿಸಿದಾಗ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ತನಿಖೆ ನಡೆಸಿ, ಸಂಬಂಧಿತ ಪೊಲೀಸ್ ಅಧಿಕಾರಿಯ ವಿರುದ್ಧ ವರದಿಗಳನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಚೆನ್ನೈ ಪೊಲೀಸರು ತಿಳಿಸಿದ್ದಾರೆ.