ನ್ಯೂಸ್ ನಾಟೌಟ್ :ಇತ್ತ ಮಳೆಗಾಲವಾದ್ರೂನು ಮಳೆನೂ ಇಲ್ಲ, ಅತ್ತ ಬಾವಿಯಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಾಗಿಲ್ಲ.ಇಂತಹ ದಯನೀಯ ಪರಿಸ್ಥಿತಿಯಲ್ಲಿ ಮಡಿಕೇರಿ (Madikeri) ತಾಲ್ಲೂಕಿನ ಕೊಯನಾಡು ಗ್ರಾಮದ 30 ಕುಟುಂಬಗಳು ಒದ್ದಾಡುತ್ತಿವೆ.
ಹೌದು, ಈ ಭಾಗದಲ್ಲಿ 30 ಕುಟುಂಬಗಳಿದ್ದು ಬಾವಿಯೇ ಇವರಿಗೆ ಮೂಲಾಧಾರವಾಗಿದೆ.ಆದರೆ ಆ ಬಾವಿಯನ್ನು ನೋಡಿದ್ರೆ ಎಂಥವರಿಗಾದರೂ ನೀರು ಕುಡಿಯೋದಕ್ಕೆ ಮನಸ್ಸೇ ಬಾರದು. ಗಬ್ಬು ನಾರುತ್ತಿರುವ ಬಾವಿ,ಬಾವಿಯೊಳಗೆ ಚಪ್ಪಲಿ, ಬಾಟಲಿ, ಕೊಳೆತ ವಸ್ತುಗಳು,ಸತ್ತ ಕೋಳಿ ಹೀಗೆ.ಸದ್ಯ ಈ ಬಾವಿ ನೀರೇ ಈ ಕುಟುಂಬಕ್ಕೆ ಆಸರೆ.ಬಾವಿಗೆ ಸೂಕ್ತ ರಕ್ಷಣೆಯಿಲ್ಲದೇ ಕೊಳೆತ ವಸ್ತುಗಳ ಆವಾಸಸ್ಥಾನವಾಗಿದೆ.ಇದರಿಂದ ಈ ಬಾವಿ ನೀರನ್ನು ಬಳಸದಂತಹ ಸ್ಥಿತಿಗೆ ತಲುಪಿದೆ.ಮಳೆ ಬಂದರೆ ಮಳೆ ನೀರನ್ನಾದರೂ ಹಿಡಿದಿಟ್ಟುಕೊಳ್ಳೋಣವೆಂದರೆ ಅದು ಕೂಡ ಕಾಲಕ್ಕೆ ಅನುಗುಣವಾಗಿ ಬರುತ್ತಿಲ್ಲ. ಹೀಗಾಗಿ ನಿತ್ಯ ಪರದಾಟಪಡಬೇಕಾದ ಪರಿಸ್ಥಿತಿ ಇವರದ್ದು.
ಇನ್ನು ಇವರಿರುವ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಖಾಸಗಿ ಬಾವಿಯಿದ್ದು,ಅದನ್ನೇ ಅವಲಂಬಿಸಿದ್ದಾರೆ.ಪ್ರತಿನಿತ್ಯ ಅಲ್ಲಿಗೆ ಹೋಗಿ ಆ ನೀರನ್ನು ಮನೆಗೆ ಹೊತ್ತು ಕೊಂಡು ಬರುತ್ತಿದ್ದಾರೆ.ಯುವಕರು ಈ ಕೆಲಸ ಮಾಡಬಹುದು.ಆದರೆ ವಯಸ್ಸಾದವರೇ ಇರುವ ಈ ಮನೆಗಳಲ್ಲಿ ಒಂದು ಕಿಲೋಮೀಟರ್ ದೂರ ಹೋಗಿ ನೀರು ಹೊತ್ತು ಕೊಂಡು ಬರೋದಂದ್ರೆನು ಸುಮ್ನೇನಾ? ಅದೂ ಸಾಧ್ಯವಾಗದೇ ಅವರ ಗೋಳು ಕೇಳೋರಿಲ್ಲ ಎಂಬಂತಾಗಿದೆ.
ಈ ಹಿಂದೆಯೂ ಅಧಿಕಾರಿಗಳಿಗೆ ಮನವಿಯನ್ನೂ ಮಾಡಲಾಗಿದೆ ಎನ್ನುವ ಅಲ್ಲಿನ ನಿವಾಸಿಗಳು ಇದಕ್ಕೆ ಯಾರು ಸ್ಪಂದನೆ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ.ನಾವು ಬಾವಿಯನ್ನು ಸ್ವಚ್ಛಗೊಳಿಸಿ ,ಅದಕ್ಕೆ ರಕ್ಷಣೆ ನೀಡಿ ಎಂದರೂ , ಬೋರ್ ವೆಲ್ ಸರಿ ಮಾಡಿಸಿ ಎಂಬ ಮನವಿ ಮಾಡಿದ್ರೂ ನಮ್ಗೆ ಯಾವುದೇ ರೀತಿಯ ಸ್ಪಂದನೆ ಇದುವೆರೆಗೂ ಸಿಕ್ಕಿಲ್ಲ.ಮಳೆಯೂ ಇಲ್ಲದ ಕಾರಣ ಮುಂದಿನ ದಿನಗಳು ಹೇಗಿರಲಿವೆಯೋ ಎಂಬುದನ್ನು ಕಲ್ಪನೆ ಮಾಡಿದ್ರೂ ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಳೆಗಾಲವೂ ಮುಗಿಯುವ ಹಂತಕ್ಕೆ ಬಂದು ತಲುಪಿದೆ.ನಮಗೆ ಬೇರೆ ಯಾವುದೇ ನೀರಿನ ಮೂಲಗಳಿಲ್ಲ.ಈ ಕೊಳಕು ಬಾವಿಯೇ ನಮಗೆ ಆಧಾರವಾಗಿದೆ. ಈಗಿರುವ ಬಾವಿಯೊಂದನ್ನು ಸ್ವಚ್ಛಗೊಳಿಸುವ ಅನಿವಾರ್ಯತೆಯಿದೆ.ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಮನಸ್ಸು ಮಾಡಿದ್ರೆ ಬಳಕೆಗೆ ಯೋಗ್ಯವಾಗುವಂತೆ ಮಾಡಬಹುದು. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ, ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಿ ಎಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.