ನ್ಯೂಸ್ ನಾಟೌಟ್: ಚೈತ್ರಾ ಕುಂದಾಪುರ ಹಗರಣ ವಿಚಾರ ಒಂದೊಂದೇ ಹೊರಬೀಳುತ್ತಿರುವ ಬೆನ್ನಲ್ಲೇ ಈಗ ಪ್ರಕರಣದ ಸೂತ್ರಧಾರಿ ಎಂದೇ ಹೇಳಲಾಗುತ್ತಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿ ಅಲಿಯಾಸ್ ಹಾಲಾಶ್ರೀ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ₹ 1.50 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದರು ಅನ್ನುವ ಆಘಾತಕಾರಿ ವಿಚಾರ ಇದೀಗ ತನಿಖೆಯಿಂದ ಹೊರಬಿದ್ದಿದೆ.
ವಂಚನೆ ಪ್ರಕರಣದ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ₹ 1.50 ಕೋಟಿ ಪಡೆದಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ಅವರನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಲಿಖಿತ ಹೇಳಿಕೆ ಪಡೆದು, ಬೆಂಗಳೂರು ಹಾಗೂ ಹಿರೇಹಡಗಲಿಯಲ್ಲಿ ಮಹಜರು ನಡೆಸುತ್ತಿದ್ದಾರೆ. ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
‘ದೂರುದಾರ ಗೋವಿಂದ ಬಾಬು ಪೂಜಾರಿಗೆ 2022ರ ಸೆಪ್ಟೆಂಬರ್ನಲ್ಲಿ ಕರೆ ಮಾಡಿದ್ದ ಚೈತ್ರಾ ಹಾಗೂ ರಮೇಶ್ ಅಲಿಯಾಸ್ ವಿಶ್ವನಾಥ್ ಜೀ, ‘ಬೈಂದೂರಿನಿಂದ ಸ್ಪರ್ಧಿಸಲು ನಿಮಗೆ ಟಿಕೆಟ್ ನೀಡಲು ಬಿಜೆಪಿ ಕೇಂದ್ರದ ನಾಯಕರು ಒಪ್ಪಿದ್ದಾರೆ. ಕರ್ನಾಟಕದಲ್ಲಿ ಸೀಟು ಹಂಚಿಕೆ ಮಾಡಲು ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಅವರ ಶಿಫಾರಸು ಬೇಕು. ಪ್ರಭಾವಿಗಳಾಗಿರುವ ಅವರನ್ನು ಭೇಟಿಯಾಗಿ’ ಎಂದಿದ್ದರು. ಇದನ್ನು ನಂಬಿದ್ದ ದೂರುದಾರ, ಸ್ವಾಮೀಜಿಯನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಮನೆ ಹಾಗೂ ಹಿರೇಹಡಗಲಿ ಮಠದಲ್ಲಿ ಹಲವು ಬಾರಿ ಭೇಟಿಯಾಗಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.
ದೂರುದಾರರನ್ನು ಮಾತನಾಡಿಸಿದ್ದ ಸ್ವಾಮೀಜಿ, ‘ಟಿಕೆಟ್ ಆಯ್ಕೆ ಸಮಿತಿಯಲ್ಲಿ ವಿಶ್ವನಾಥ್ ಜೀ ಅವರು ಹಿರಿಯರು. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರ ಜೊತೆಗೂ ನಾನು ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ನಿಮಗೆ ಟಿಕೆಟ್ ಕೊಡಿಸುತ್ತೇನೆ. ಇದಕ್ಕಾಗಿ ₹ 1.50 ಕೋಟಿ ನೀಡಬೇಕು’ ಎಂದಿದ್ದರು. ಸ್ವಾಮೀಜಿ ಹೇಳಿದ್ದ ಸುಳ್ಳನ್ನೇ ನಿಜವೆಂದು ನಂಬಿದ್ದ ದೂರುದಾರ ಹಣ ನೀಡಿದ್ದರು.’ ‘ವಿಶ್ವನಾಥ್ ಜೀ ತೀರಿಕೊಂಡಿರುವುದಾಗಿ ಚೈತ್ರಾ ಹಾಗೂ ಇತರರು, ನಾಟಕವಾಡಿದ್ದರು. ಅವರೆಲ್ಲರೂ ಸೇರಿ ತಮ್ಮನ್ನು ವಂಚಿಸುತ್ತಿರುವುದು ಗೋವಿಂದ ಬಾಬು ಅವರಿಗೆ ಗೊತ್ತಾಗಿತ್ತು. ಅವಾಗಲೇ, ತಮ್ಮ ಹಣ ವಾಪಸು ಪಡೆಯಲು ಪ್ರಯತ್ನಿಸಿದ್ದರು. ಸ್ವಾಮೀಜಿಯನ್ನು ಪುನಃ ಭೇಟಿಯಾಗಿದ್ದರು.’ ‘ವಿಶ್ವನಾಥ್ ಜೀ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಪಡೆದಿರುವ ₹ 1.50 ಕೋಟಿ ಹಣವನ್ನು ಒಂದು ತಿಂಗಳೊಳಗೆ ವಾಪಸು ನೀಡುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ’ ಎಂದು ಸ್ವಾಮೀಜಿ ಕೇಳಿಕೊಂಡಿದ್ದರು. ಇದಾದ ನಂತರ ಸ್ವಾಮೀಜಿ ಸಹ ನಾಪತ್ತೆಯಾಗಿದ್ದರು. ಇದೀಗ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಪ್ರಧಾನಿ ಹೆಸರು ಬಳಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.