ನ್ಯೂಸ್ ನಾಟೌಟ್ :ರೆನಾಲ್ಡ್ಸ್ ಪೆನ್,ಒಂದು ಕಾಲದಲ್ಲಿ ಇದರದ್ದೇ ಹವಾ..ಬೇರೆ ಕಂಪೆನಿ ಪೆನ್ಗಳಿದ್ದರೂ ಮಕ್ಕಳ ಫೇವರಿಟ್ ರೆನಾಲ್ಡ್ಸ್ ಪೆನ್. ಆದರೆ ಇನ್ನದು ಬರಿ ನೆನಪಾಗಿ ಉಳಿಯಲಿರುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ. ಹೀಗೆ ವಿದ್ಯಾರ್ಥಿಗಳ ಹಾಗೂ ನೌಕರರ ಜತೆ ಬಾಂಧವ್ಯ ಹೊಂದಿದ್ದ ರೆನಾಲ್ಡ್ಸ್ ಪೆನ್ನು ಮಾರುಕಟ್ಟೆಯಿಂದ ಕಣ್ಮರೆಯಾಗುತ್ತಿವೆ ಅನ್ನುವ ಮಾತನ್ನು ಬಹುತೇಕರಿಗೆ ಅರಗಿಸಿಕೊಳ್ಲಲಾಗುತ್ತಿಲ್ಲ.
ರೆನಾಲ್ಡ್ಸ್ ತನ್ನ ಐಕಾನಿಕ್ ಬಾಲ್ ಪೆನ್, 045 ಅನ್ನು ನಿಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ನಂತರ ’90 ರ ದಶಕದವರು ನಿರಾಶೆಗೊಂಡಿದ್ದಾರೆ. ರೆನಾಲ್ಡ್ಸ್ ಪೆನ್ ಅಂದಾಕ್ಷಣ ಹಳೆಯ ಮಧುರ ನೆನಪುಗಳು ಕಾಡತೊಡಗುತ್ತವೆ.ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನೇ ಬರೆದ ಈ ಪೆನ್ ಇನ್ಮುಂದೆ ಮಾರುಕಟ್ಟೆ ಸಿಗಲ್ಲ ಎಂಬ ಸುದ್ದಿಯನ್ನು ಊಹಿಸಿಕೊಳ್ಳೋದಕ್ಕು ಅಸಾಧ್ಯವಾಗಿದೆ.
1945ರಲ್ಲಿ ಅಮೆರಿಕದಲ್ಲಿ ವ್ಯವಹಾರ ಆರಂಭಿಸಿದ ರೇನಾಲ್ಡ್ಸ್ 1948ರಲ್ಲಿ ಯೂರೋಪಿಯನ್ ಮಾರುಕಟ್ಟೆ ಪ್ರವೇಶಿಸಿತು. 1959ರಲ್ಲಿ ಸೌತ್ ಆಫ್ರಿಕಾದಲ್ಲಿ ಶುರುವಾಯಿತು. ಬಳಿಕ ಮೆಕ್ಸಿಕೋ, ಫ್ರಾನ್ಸ್, ಭಾರತದಲ್ಲಿ ಇದರ ಅಂಗಸಂಸ್ಥೆಗಳು ಪ್ರಾರಂಭವಾದವು.ಅಮೆರಿಕ ಮೂಲದ ರೇನಾಲ್ಡ್ಸ್ ಪೆನ್ ಭಾರತೀಯರ ಪಾಲಿಗೆ ಭಾರತೀಯ ಕಂಪನಿಯೇ ಆಗಿದೆ. ಎಂಬತ್ತು, ತೊಂಬತ್ತರ ದಶಕದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಪೆನ್ ರೇನಾಲ್ಡ್ಸ್ನದ್ದಾಗಿದೆ.
ರೆನಾಲ್ಡ್ಸ್ ಪೆನ್ನುಗಳಿಗೆ ಪಾರ್ಕರ್, ಪೈಲಟ್ ಮತ್ತು ಮಿತ್ಸುಬಿಷಿ ಸೇರಿದಂತೆ ಸುಮಾರು ಪೆನ್ನುಗಳು ಪ್ರತಿಸ್ಪರ್ಧಿಗಳಿದ್ದವು. ಆದರೆ ಜೇಬುಗಳಲ್ಲಿ ಇಟ್ಟುಕೊಂಡಾಗ ಈ ಪೆನ್ಗಳು ಸೋರಿಕೆಯಾಗಿ ಬಟ್ಟೆ, ಬ್ಯಾಗ್ ಎಲ್ಲವೂ ನೀಲಿ ಆಗುತ್ತಿದ್ದವು ಮತ್ತು ಬೆಲೆ ವಿಚಾರವಾಗಿ ದುಬಾರಿ ಕೂಡ ಆಗಿದ್ದವು. ಆದರೆ ರೆನಾಲ್ಡ್ಸ್ ಪೆನ್ನುಗಳಲ್ಲಿ ಈ ದೂರುಗಳೇ ಇರಲಿಲ್ಲ. ಆದರೆ, ರೇನಾಲ್ಡ್ಸ್ನ ಜನಪ್ರಿಯ 045 ಪೆನ್ ಸರಬರಾಜು ನಿಂತುಹೋಗುತ್ತದೆ ಎಂಬಂತಹ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಈ ಕುರಿತಾಗಿ ಕಂಪನಿ ಸ್ಪಷ್ಟನೆ ನೀಡಿದೆ.
‘ ರೇನಾಲ್ಡ್ಸ್ ಪೆನ್ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು. ವಿವಿಧ ಮಾಧ್ಯಗಳಲ್ಲಿ ರೇನಾಲ್ಡ್ಸ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದೆ. ಭಾರತದಲ್ಲಿ 45 ವರ್ಷ ವ್ಯವಹಾರದ ನಂಟು ಹೊಂದಿರುವ ರೇನಾಲ್ಡ್ಸ್ ಸಂಸ್ಥೆ ಗುಣಮಟ್ಟ ಮತ್ತು ನಾವೀನ್ಯತೆಗೆ ಆದ್ಯತೆ ಕೊಡುತ್ತಾ ಬಂದಿದೆ. ಭಾರತದಲ್ಲಿ ಬರವಣಿಗೆ ವ್ಯವಹಾರವನ್ನು ಬೆಳೆಸುವ ಮತ್ತು ವಿಸ್ತರಿಸುವ ಭವಿಷ್ಯದ ಯೋಜನೆ ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.
ಸರಿಯಾದ ಮಾಹಿತಿಗೆ ನಮ್ಮ ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಚಾನಲ್ಗಳನ್ನು ನೋಡಿ. ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಅತಿಪ್ರಮುಖ ಆದ್ಯತೆಯಾಗಿದೆ’ ಎಂದು ರೇನಾಲ್ಡ್ಸ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಹೇಳಿಕೆ ಬಿಡುಗಡೆ ಮಾಡಿದೆ.ಐಕಾನಿಕ್ ಪೆನ್ನನ್ನು ಸ್ಥಗಿತಗೊಳಿಸುವ ಬಗ್ಗೆ ಊಹಾಪೋಹಗಳಿಗೆ ಕೊನೆ ಹಾಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ದೃಢವಾದ ಅಸ್ತಿತ್ವವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಕಂಪನಿಯು ದೃಢವಾಗಿ ಪ್ರತಿಪಾದಿಸಿದೆ.