ನ್ಯೂಸ್ ನಾಟೌಟ್ : ಮಕ್ಕಳನ್ನು ಎಷ್ಟೇ ಜಾಗರೂಕತೆಯಿಂದ ನೋಡಿಕೊಂಡರೂ ಸಾಕಾಗೋದಿಲ್ಲ.ದೊಡ್ಡವರು ಸ್ವಲ್ಪ ಕಣ್ತಪ್ಪಿಸಿದರೂ ಏನಾದರೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ. ಇಲ್ಲೊಬ್ಬಳು ಎರಡು ವರ್ಷದ ಬಾಲಕಿ ತನ್ನ ಮನೆಯಲ್ಲಿ ಆಕಸ್ಮಿಕವಾಗಿ ಸೊಳ್ಳೆ ನಿವಾರಕ ಲಿಕ್ವಿಡ್ ಅನ್ನು ಸೇವಿಸಿ ಕೊನೆಯುಸಿರೆಳೆದಿದ್ದಾಳೆ.
ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಈ ಸಂಬಂಧ ಮಾಧವರಂ ಮಿಲ್ಕ್ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಂತ್ರಸ್ತೆಯನ್ನು ಬಿ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಆರ್ ಬಾಲಾಜಿ (35) ಮತ್ತು ಅವರ ಪತ್ನಿ ನಂದಿನಿ ಅವರ ಕಿರಿಯ ಮಗಳಾಗಿದ್ದು, ಆಕೆಗೆ ನಾಲ್ಕು ವರ್ಷದ ಶಕ್ತಿ ಎಂಬ ಅಕ್ಕ ಕೂಡ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಾಜಿಯ ತಂದೆ ರಾಮದಾಸ್ ಜೊತೆಗೆ ನಾಲ್ವರ ಕುಟುಂಬ ಮನಾಲಿ ಬಳಿಯ ಚಿನ್ನಾ ಮಾಥೂರ್ನಲ್ಲಿರುವ ಮನೆಯಲ್ಲಿ ವಾಸವಾಗಿದ್ದರು.ಸೋಮವಾರ ಬಾಲಾಜಿ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ರಾಮದಾಸ್ ಕೂಡ ಕೆಲಸಕ್ಕಾಗಿ ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂದಿನಿ ಸ್ನಾನ ಮಾಡಲು ತೆರಳಿದ್ದರು. ಆಗ ಮನೆಯಲ್ಲಿ ಲಕ್ಷ್ಮಿ ಮತ್ತು ಶಕ್ತಿ ಆಟವಾಡುತ್ತಿದ್ದರು. ನಂದಿನಿ ಸ್ನಾನದಿಂದ ಹೊರಬಂದು ನೋಡಿದಾಗ ಲಕ್ಷ್ಮಿ ಬಾಯಲ್ಲಿ ಸೊಳ್ಳೆ ನಿವಾರಕ ಲಿಕ್ವಿಡ್ ತುಂಬಿದ್ದ ಡಬ್ಬಿ ಇತ್ತು. ಕೂಡಲೇ ಬಾಯಿಯಿಂದ ನೊರೆ ಬರುತ್ತಿದ್ದ ಲಕ್ಷ್ಮಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸಲಿಲ್ಲವೆಂದು ತಿಳಿದು ಬಂದಿದೆ.