ನ್ಯೂಸ್ ನಾಟೌಟ್ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ,ಮಡಿಕೇರಿ ತಾಲ್ಲೂಕು ಘಟಕ, ಸಂಪಾಜೆ ಹೋಬಳಿ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಇಂದು ಸಂಪಾಜೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತೆರಳಿದಾಗ ಮನೆ ತೆರಿಗೆ, ನೀರಿನ ತೆರಿಗೆ ಪಾವತಿ ಮಾಡದೇ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬಿಲ್ ಕಲೆಕ್ಟರ್ ಹರೀಶ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.
ಸಂಪಾಜೆ ಗೇಟ್ ಬಳಿಯಿಂದ ಮೆರವಣಿಗೆ ಮೂಲಕ ಗ್ರಾಮ ಪಂಚಾಯತ್ ಆವರಣ ತಲುಪಿ ಪ್ರತಿಭಟಿಸಲಾಯಿತು.ನಂತರ ಮಾತಾನಾಡಿದ ಜಿಲ್ಲಾ ಅಧ್ಯಕ್ಷರಾದ ಶ್ರೀ ದಿವಾಕರ್ ಹೆಚ್ ಎಲ್ ,ದಲಿತರನ್ನು ಕಡೆಗಣಿಸುವ ಪ್ರಕರಣಗಳು ಕೊಡಗು ಜಿಲ್ಲೆಯ ಎಲ್ಲಾ ಪಂಚಾಯತ್ ಗಳಲ್ಲಿ ಕಂಡು ಬರುತ್ತಿದ್ದು, ಬಿಲ್ ಕಲೆಕ್ಟರ್ ಹರೀಶ್ ಅವರನ್ನು ಅಮಾನತು ಮಾಡದಿದ್ದಲ್ಲಿ ಆಗಸ್ಟ್ 14 ರ ಮಧ್ಯರಾತ್ರಿ ಮಡಿಕೇರಿ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ .
ಬಳಿಕ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ದೀಪಕ್ ಪೊನ್ನಪ್ಪ ಮನವಿ ಪತ್ರವನ್ನು ಓದಿ, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ನಮ್ಮ ದಲಿತ ಬಂಧುಗಳಿಗೆ ನ್ಯಾಯವನ್ನು ಒದಗಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಪಾಜೆ ಹೋಬಳಿ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ಹೆಚ್.ಬಿ, ಉಪಾಧ್ಯಕ್ಷರಾದ ಶ್ರೀ ಸುಂದರ ಹೆಚ್.ಬಿ ಹಾಗೂ ಸದಸ್ಯರು ಭಾಗವಹಿಸಿದ್ದರು.